×
Ad

ಬೆಂಗಳೂರು: ವಿಜೃಂಭಣೆಯಿಂದ ನಡೆದ ಬ್ಯಾರಿ ಕೂಟ

Update: 2025-02-26 19:54 IST

ಬೆಂಗಳೂರು: ಉದ್ಯೋಗ, ಉದ್ಯಮಕ್ಕಾಗಿ ನಗರದಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಬ್ಯಾರಿ ಸಮುದಾಯದ ಜನರು ಒಂದೇ ಸೂರಿನಡಿಯಲ್ಲಿ ಸೇರಿ ನಡೆಸಿದ ಬ್ಯಾರಿ ಕೂಟವು ವಿಜೃಂಭಣೆಯಿಂದ ನಡೆಯಿತು.

"ಬ್ಯಾರಿ" ಗಳೆಂದರೆ ಕರಾವಳಿ ಕರ್ನಾಟಕದ ಮುಸ್ಲಿಂ ಸಮುದಾಯವಾಗಿದೆ. ಬ್ಯಾರಿ ಭಾಷೆ ರಾಜ್ಯದ ಉಪಭಾಷೆಯಾಗಿದ್ದು, ಬ್ಯಾರಿ ಸಮುದಾಯದಲ್ಲಿ ಸಾಂಸ್ಕೃತಿಕ, ಕಲೆಗಳಿಗೆ ವಿಶೇಷ ಕೊಡುಗೆಗಳನ್ನು ನೀಡಿದೆ. ಸುಮಾರು 21 ಲಕ್ಷದಷ್ಟೂ ಜನರು ಬ್ಯಾರಿ ಭಾಷೆಯನ್ನು ಮಾತನಾಡುವವರಿದ್ದಾರೆ.

ಬೆಂಗಳೂರಿನಲ್ಲಿ ಬೆರಳು ಏಣಿಕೆಯಷ್ಟು ಇದ್ದ ಬ್ಯಾರಿಗಳ ಸಂಖ್ಯೆ ಪ್ರಸ್ತುತ ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರಗಳಲ್ಲೂ ವಿಶ್ವದಾದ್ಯಂತ ಬ್ಯಾರಿ ಸಮುದಾಯದ ಜನರು ತನ್ನದೇ ಆದ ಛಾಪು ಮೂಡಿಸಿದ್ದಾರೆ.


ರಕ್ತದಾನ ಶಿಬಿರ: ಬ್ಯಾರಿ ಕೂಟದ ಪ್ರಯುಕ್ತವಾಗಿ ನಾರಾಯಣ ಹೃದಯಾಲಯ ಹಾಗೂ ಎಚ್‌ಎಸ್ & ಎಚ್ಎಂಎಸ್ ಸಹಯೋಗದಿಂದ ರಕ್ತದಾನ ಶಿಬಿರ ನಡೆಯಲಾಯಿತು. 40ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಮಕ್ಕಳಿಗೆ ಆಟೋಟ: ಸಂಗೀತಾ ಕುರ್ಚಿ ಸಹಿತ ಮಕ್ಕಳಿಗೆ ಮನೋರಂಜನಾ ಅಟಗಳು ಜರುಗಿದವು.


ಬೆಂಕಿ ರಹಿತ ಅಡುಗೆ: ಬ್ಯಾರಿ ಕೂಟದಲ್ಲಿ ಕರಾವಳಿ ಭಾಗದ ಮಹಿಳೆಯರಿಂದ ವಿಶೇಷವಾಗಿ ಅಕರ್ಷಣೆಯಾಗಿ ಬೆಂಕಿ ರಹಿತ ಅಡುಗೆ ಸ್ಪರ್ಧೆ ಗಮನ ಸೆಳೆಯಿತು. ಇದರಲ್ಲಿ ಹನ್ನೊಂದು ಸ್ಪರ್ಧಾರ್ಥಿಗಳು ಭಾಗಿಯಾದರು.

ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವುದರೊಂದಿಗೆ 1 ಗ್ರಾಂ ಚಿನ್ನ ಗಳಿಸಿದ ಸಾಜಿದಾ, ಇರ್ಫಾನಾ, ಹರ್ಷಿನ್ ಗಾಂಧಿ ನಗರ ಮಾತನಾಡಿ, ಒಂದು ಗಂಟೆಯಲ್ಲಿ ಬಾಳೆ ಎಲೆಯೂಟದಲ್ಲಿ ಕಾಳು ಪಲ್ಯ, ಅವಿಲ್ ಅನ್ನು ರೈಸ್ ತರಹ ಬಳಸಿದ್ದೇವೆ. ಕಡಲೆ ಬೀಜ ಹಾಕಿ ಪಲಾವು, ಮೊಸರನ್ನ, ತೆಂಗಿನ ಕಾಯಿಯ ಲಡ್ಡು ಹಾಗೂ ಈ ರೀತಿ ಹೊಸ ವಿಶಿಷ್ಟ ರೀತಿಯ ಆರೋಗ್ಯ ಯುಕ್ತ ಆಹಾರ ಮಾಡಿದ್ದೇವೆ. ಇದಕ್ಕೆ ಪ್ರಥಮ ಸ್ಥಾನ ಬಂದಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತಾಜುನ್ನುಶ್ರಫ್ ಬಜ್ಪೆ ಅವರ ಚಂ ಚಂ, ರೌಫಾ ಬಿಸಿರೋಡ್ ಮಿಕ್ಸ್ ಫ್ರೂಟ್ಸ್ ಟ್ರಫಲ್, ಅಶೂರ ಉಳ್ಳಾಲ ಅವರಿಂದ ಕುಕುಂಬ್ ಬೋಟ್ಸ್, ಡೇಟ್ಸ್ ಲಡ್ಡು, ಅಶೂರಾ ಕಕ್ಕಿಂಜೆ ಅವರು ರಸುಮಲ್ಲಯಿ, ಕುಕ್ಕುಂಬಾರ್ ಶುಚಿ, ರುಸೈಯಾ ಬೆಳ್ತಂಗಡಿ ಅವರು ಫ್ರೆಶ್ ಕ್ರೀಮ್ ಫ್ರೂಟ್ಸ್ ಸಲಾಡ್, ಬ್ರೆಡ್ ಪುಡ್ಡಿಂಗ್, ತೆಂಗಿನ ಕಾಯಿಯ ಕೇಕ್, ಸೌಧಾ ಕುಂದಾಪುರ ಅವರ ಚೀಯಾ ಶೀಡ್ಸ್ ಪುಂಡಿಂಗ್ , ಹುಸ್ನಾ ಮೇನ್ಹಾ ಉಳ್ಳಾಲ ಅವರ ಸ್ಟಾಬರಿ ನೆಟಲ್ಸ್ ಮೌಸ್ ಆಹಾರ ವಿಶೇಷವಾದ ಗಮನ ಸೆಳೆಯಿತು.


ಬ್ಯಾರಿ ಬ್ಯುಸಿನೆಸ್ ಡೈರೆಕ್ಟರಿ ಬಿಡುಗಡೆ

ಕಳೆದ 9 ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ 'ಬ್ಯಾರಿ ಇನ್ಫೋ‌ ಡಾಟ್ ಕಾಂ' (www.bearyinfo.com) ವೆಬ್ ಸೈಟ್‌ನ ಹೊಸ ವಿಭಾಗ ಬ್ಯಾರಿ ಬ್ಯುಸಿನೆಸ್ ಡೈರಿಕ್ಟರಿ ಲೋಕಾರ್ಪಣೆಗೊಂಡಿತ್ತು.

ಇಡೀ ವಿಶ್ವದಲ್ಲಿರುವ ಬ್ಯಾರಿ ಉದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರು, ವೈದ್ಯರು, ವಕೀಲರು ಸಹಿತ ವೃತ್ತಿಪರರು ತನ್ನ ಮಾಹಿತಿಗಳನ್ನು ಉಚಿತವಾಗಿಯೇ ನೋದಾಯಿಸಿಕೊಳ್ಳಬಹುದಾಗಿದೆ. ಸ್ಥಾಪಕರಾದ ಮುಹಮ್ಮದ್ ಅಲಿ ಕಮ್ಮರಡಿ, ಮುಹಮ್ಮದ್ ಕುಳಾಯಿ, ಶಹಾಝ್ ಮುಹಮ್ಮದ್, ಉಮರ್ ಟೀಕೆ, ಇಕ್ಬಾಲ್ ಅಹ್ಮದ್, ಶಬೀರ್, ಬದ್ರುದ್ದೀನ್ ಕೆ. ಮಾಣಿ ಸಹಿತ ಗಣ್ಯರು ಉಪಸ್ಥಿತರಿದ್ದರು.

ಸಾಂಸ್ಕೃತಿಕ, ಆಹಾರ ಮೇಳ

ಕರಾವಳಿಯ ಸಾಂಸ್ಕೃತಿಕ ರಂಗು ದಫ್, ಮಾಪ್ಪಿಳ ಹಾಡುಗಳು ಕೇಳುಗರನ್ನು ಇಂಪು ಮಾಡಿಸಿದ್ದವು. ಮಾತ್ರವಲ್ಲದೇ ಬ್ಯಾರಿಗಳ ಆಹಾರ ಶೈಲಿಗಳಾದ ನೀರು ದೋಸೆ, ಕಲ್ತಪ್ಪ, ಮೀನು ಸಾರು ಗಳಂತಹ ಆಹಾರಗಳು ಕೂಟದಲ್ಲಿ ತಿಂಡಿ ಪ್ರಿಯರನ್ನು ಕೈಬಿಸಿ ಕರೆಯುತ್ತಿತ್ತು. ಬ್ಯಾರಿ ವಸ್ತು ಪ್ರದರ್ಶನವು ಇದ್ದವು.


ಬ್ಯಾರಿ ಕೂಟದಲ್ಲಿ ಸೇರಿದವರು ಹೇಳಿದ್ದೇನು?

"ಬಾಲ್ಯದ ದಿನಗಳು ನೆನಪಾಯಿತು..."

ಬ್ಯಾರಿ ಸಮುದಾಯ ಸಂಸ್ಕೃತಿ, ಇತಿಹಾಸವನ್ನು ಎತ್ತಿ ಹಿಡಿಯಲು ಬ್ಯಾರಿ ಕೂಟ ಆಯೋಜನೆಯಾಗುತ್ತಿರಬೇಕು. ಕರಾವಳಿ ಭಾಗದ ಲಾಗೋರಿ, ಗೋಲಿ ಆಟ ಆಡಿದಾಗ ಬಾಲ್ಯದ ದಿನಗಳಿಗೆ ಕರೆದುಕೊಂಡು ಹೋಯಿತು. - ಝೋಹರಾ ನಿಸಾರ್ ಪುತ್ತೂರು

"ಇಂತಹ ಕೂಟಗಳು ಪ್ರಸ್ತುತ ದಿನಗಳಲ್ಲಿ ಅಗತ್ಯ.."

15 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದೇವೆ. ಪ್ರಸ್ತುತ ದಿನಗಳಲ್ಲಿ ಇಂತಹ ಬ್ಯಾರಿ ಕೂಟಗಳು ಇನ್ನಷ್ಟು ನಡೆಯುತ್ತಿರಲಿ ಎಂಬುವುದು ನಮ್ಮ ಆಶಯ. - ನಿಸಾತ್ ಫಾತಿಮಾ, ಮಂಗಳೂರು

"ಬ್ಯಾರಿ ಕೂಟ ಹಬ್ಬದಂತಾಗಿದೆ..."

ಬೆಂಗಳೂರಿಗೆ ಬಂದು ಇಲ್ಲಿ ಇಷ್ಟು ದೊಡ್ಡ ಮಟ್ಟದ ಸಾವಿರಾರು ಮಂದಿ ಸೇರಿ ಮಾಡಿರುವ ಬ್ಯಾರಿ ಕೂಟ ಹಬ್ಬದ ಕಳೆ ಬಂತಾಗಿದೆ. ಇಲ್ಲಿ ಹಲವಾರು ಮಂದಿಗಳ ಪರಿಚಯ ಆಯಿತು. - ಅಶ್ರಫ್ ಕೊಡ್ಲಿಪೇಟೆ

"ಸೋಶಿಯಲ್ ಮೀಡಿಯಾ ಜಗತ್ತಲ್ಲಿ ಇಂತಹ ಕೂಟ ಅಗತ್ಯ.."

ಡಿಜಿಟಲ್ ಲೋಕದಲ್ಲಿ ಎಲ್ಲರೂ ಸೋಶಿಯಲ್ ಮೀಡಿಯದಲ್ಲಿ ಮೊಬೈಲ್‌ನಲ್ಲೇ ಕಳೆದು ಹೋಗಿದ್ದಾರೆ. ಇಂತಹ ಕೂಟಗಳು ಜನರ ಮನಶಾಂತಿಗೆ ಪೂರಕವಾಗಿರುತ್ತದೆ. - ಇರ್ಫಾನ್ ವಿಟ್ಲ










Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಬ್ರಾಹಿಂ ಖಲೀಲ್ ಬನ್ನೂರು

contributor

Similar News