ಚುನಾವಣಾ ತಕರಾರು ಅರ್ಜಿ | ಸೌಮ್ಯಾ ರೆಡ್ಡಿ ವಿರುದ್ದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು: ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ವಿರುದ್ಧ ಸೌಮ್ಯ ರೆಡ್ಡಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿ.ಕೆ.ರಾಮಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಸಿ.ಕೆ.ರಾಮಮೂರ್ತಿ ವಿರುದ್ಧ ಸೌಮ್ಯ ರೆಡ್ಡಿ ಚುನಾವಣಾ ತಕರಾರು ವಿಚಾರವಾಗಿ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಡಿವಿಡಿ ಸೇರಿ 10 ದಾಖಲೆ ಹಾಜರುಪಡಿಸಲು ಪರಾಜಿತ ಅಭ್ಯರ್ಥಿ ಸೌಮ್ಯಾರೆಡ್ಡಿಗೆ ಹೈಕೋರ್ಟ್ ಅನುಮತಿ ನೀಡಿತ್ತು.
ಆದರೆ, ಈ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿ.ಕೆ.ರಾಮಮೂರ್ತಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ಸಂಬಂಧ ಸೋಮವಾರ ವಿಚಾರಣೆ ನಡೆದು ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಸಿ.ಕೆ.ರಾಮಮೂರ್ತಿ ಅರ್ಜಿವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಅಲ್ಲದೆ, ಸೌಮ್ಯಾ ರೆಡ್ಡಿ ಸಲ್ಲಿಸಿರುವ ದಾಖಲೆಗೆ 3 ವಾರಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸಲು ಸುಪ್ರೀಂ ಅವಕಾಶ ನೀಡಿದೆ.
2023ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ ಕೇವಲ 16 ಮತಗಳ ಅಂತರದಿಂಂದ ರಾಮಮೂರ್ತಿ ವಿರುದ್ಧ ಸೋತಿದ್ದರು. ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಸೌಮ್ಯಾ ರೆಡ್ಡಿ ಆರೋಪಿಸಿದ್ದರು. ರಾಮಮೂರ್ತಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್, ಡಿವಿಡಿ ಸೇರಿದಂತೆ 10 ಪ್ರಮುಖ ದಾಖಲೆಗಳನ್ನು ಹಾಜರುಪಡಿಸಲು ಫೆ.14ರಂದು ಅನುಮತಿ ನೀಡಿತ್ತು.