ನಾಲ್ಕು ಹಂತದಲ್ಲಿ ಕುಂದು-ಕೊರತೆ ಕೋಶ ರಚಿಸಿ ಅಧಿಸೂಚನೆ ಹೊರಡಿಸಿದ ಶಾಲಾ ಶಿಕ್ಷಣ ಇಲಾಖೆ
ಬೆಂಗಳೂರು : ಅನಗತ್ಯವಾಗಿ ವಿವಿಧ ನ್ಯಾಯಾಲಯಗಳಲ್ಲಿ ದಾವೆ ದಾಖಲಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ನಾಲ್ಕು ಹಂತದಲ್ಲಿ ಕುಂದು ಕೊರತೆ ಕೋಶವನ್ನು ರಚನೆ ಮಾಡಲಾಗಿದ್ದು, ಮನವಿ, ದೂರು ಮತ್ತು ಅರ್ಜಿಗಳನ್ನು ಇಲಾಖೆಯ ವಿವಿಧ ಹಂತಗಳಲ್ಲಿಯೇ ಇತ್ಯರ್ಥಪಡಿಸುವಂತೆ ಇಲಾಖೆಯ ಆಯುಕ್ತ ಡಾ. ಕೆ.ವಿ. ತ್ರಿಲೋಕ್ ಚಂದ್ರ ಸೂಚನೆ ನೀಡಿದ್ದಾರೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ಅವರು, ಇಲಾಖೆಯ ಕ್ರಮಗಳಿಂದ ಬಾಧಿತರಾಗುವ ಇಲಾಖೆಯ ನೌಕರರಿಗೆ ಹಾಗೂ ಖಾಸಗಿ ಅನುದಾನಿತ, ಅನುದಾನರಹಿತ ಶಾಲೆಗಳ ನೌಕರರು ಹಾಗೂ ಶಾಲಾ ಆಡಳಿತ ಮಂಡಳಿಗಳು ಲಿಖಿತ ರೂಪದಲ್ಲಿ ಸಮರ್ಥನೀಯ ದಾಖಲೆಗಳೊಂದಿಗೆ ತಮ್ಮ ಅಹವಾಲುಗಳನ್ನು ಇಲಾಖೆಯ ಕುಂದು ಕೊರತೆ ಕೋಶಕ್ಕೆ ಸಲ್ಲಿಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತವಾಗಿದೆ ಎಂದಿದ್ದಾರೆ.
ತಾಲ್ಲೂಕು ಕುಂದು ಕೊರತೆ ಕೋಶ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಛೇರಿಯ ವ್ಯವಸ್ಥಾಪಕರು ಹಾಗೂ ಒರ್ವ ಅಧೀಕ್ಷಕರನ್ನು ಒಳಗೊಂಡಂತೆ ರಚಿಸಲಾಗುವ ತಾಲ್ಲೂಕು ಹಂತದ ಕುಂದು ಕೊರತೆ ಕೋಶವು ಮನವಿ/ಅರ್ಜಿ ಸ್ವೀಕೃತವಾದ 7 ದಿನಗಳೊಳಗೆ ನಿಯಮಾನುಸಾರ ಪರಿಶೀಲಿಸಿ ಮನವಿ/ ಅರ್ಜಿಯನ್ನು ಇತ್ಯರ್ಥಪಡಿಸಿ ಮನವಿದಾರರಿಗೆ ಸೂಕ್ತ ಸವಿವರವಾದ ಹಿಂಬರಹ ನೀಡಲು ಕ್ರಮವಹಿಸಬೇಕು. ಸಂಬಂಧಿಸಿದ ಬಾಧಿತರು ತಾಲ್ಲೂಕು ಹಂತದಲ್ಲಿ ತೆಗೆದುಕೊಂಡ ಕ್ರಮದ ಬಗ್ಗೆ ಸಹಮತಿ ಇಲ್ಲದಿದ್ದಲ್ಲಿ ಜಿಲ್ಲಾ ಕುಂದು ಕೊರತೆ ಕೋಶವನ್ನು ಲಿಖಿತ ಮೇಲ್ಮನವಿಯೊಂದಿಗೆ ಸಂಪರ್ಕಿಸಬಹುದು.
ಜಿಲ್ಲಾ ಕುಂದು ಕೊರತೆ ಕೋಶ: ಇಲಾಖೆಯ ಜಿಲ್ಲಾ ಉಪನಿರ್ದೇಶಕ(ಆಡಳಿತ) ಅಧ್ಯಕ್ಷತೆಯಲ್ಲಿ ಕಛೇರಿಯ ಸಹಾಯಕರು ಹಾಗೂ ಸಂಬಂಧಿಸಿದ ವಿಭಾಗದ ಅಧೀಕ್ಷಕರನ್ನು ಒಳಗೊಂಡಂತೆ ರಚಿಸಲಾಗುವ ಜಿಲ್ಲಾ ಹಂತದ ಕುಂದು ಕೊರತೆ ಕೋಶವು ಮನವಿ ಸ್ವೀಕೃತವಾದ 7 ದಿನಗಳೊಳಗೆ ನಿಯಮಾನುಸಾರ ಮನವಿ/ಅರ್ಜಿಯನ್ನು ಇತ್ಯರ್ಥಪಡಿಸಲು ಕ್ರಮವಹಿಸಿ ಮನವಿದಾರರಿಗೆ ಸೂಕ್ತ ಹಿಂಬರಹ ನೀಡಲು ಕ್ರಮವಹಿಸಬೇಕು. ಬಾಧಿತರು ಜಿಲ್ಲಾ ಹಂತದಲ್ಲಿ ತೆಗೆದುಕೊಂಡ ಕ್ರಮದ ಬಗ್ಗೆ ಸಹಮತಿ ಇಲ್ಲದಿದ್ದಲ್ಲಿ ವಿಭಾಗೀಯ ಕುಂದು ಕೊರತೆ ಕೋಶವನ್ನು ಲಿಖಿತ ಮೇಲ್ಮನವಿಯೊಂದಿಗೆ ಸಂಪರ್ಕಿಸಬಹುದು.
ವಿಭಾಗೀಯ ಕುಂದು ಕೊರತೆ ಕೋಶ: ವಿಭಾಗೀಯ ಸಹ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕಛೇರಿಯ ಸಹಾಯಕ ನಿರ್ದೇಶಕರು ಹಾಗೂ ಸಂಬಂಧಿಸಿದ ಅಧೀಕ್ಷಕರನ್ನು ಒಳಗೊಂಡಂತೆ ರಚಿಸಲಾಗುವ ವಿಭಾಗೀಯ ಕುಂದು ಕೊರತೆ ಕೋಶವು ಮನವಿ ಸ್ವೀಕೃತವಾದ 7 ದಿನಗಳೊಳಗೆ ನಿಯಮಾನುಸಾರ ಮನವಿ/ಅರ್ಜಿಯನ್ನು ಇತ್ಯರ್ಥಪಡಿಸಲು ಕ್ರಮವಹಿಸಿ ಮನವಿದಾರರಿಗೆ ಸೂಕ್ತ ಹಿಂಬರಹ ನೀಡಲು ಕ್ರಮವಹಿಸಬೇಕು. ಬಾಧಿತರು ವಿಭಾಗೀಯ ಸಹ ನಿರ್ದೇಶಕರ ಕ್ರಮದ ಬಗ್ಗೆ ಸಹಮತಿ ಇಲ್ಲದಿದ್ದಲ್ಲಿ ಆಯುಕ್ತಾಲಯದ ಕುಂದು ಕೊರತೆ ಕೋಶಕ್ಕೆ ಲಿಖಿತ ಪುನರ್ ಪರಿಶೀಲನಾ ಮೇಲ್ಮನವಿ ಸಲ್ಲಿಸಬಹುದು.
ಆಯುಕ್ತಾಲಯದ ಕುಂದು ಕೊರತೆ ಕೋಶ: ಆಯುಕ್ತಾಲಯದ ವ್ಯಾಪ್ತಿಯ ಜಂಟಿ ನಿರ್ದೇಶಕರು / ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕಛೇರಿಯ ಉಪ ನಿರ್ದೇಶಕರು ಹಾಗೂ ಸಂಬಂಧಿಸಿದ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರನ್ನು / ಸಹಾಯಕ ನಿರ್ದೇಶಕರನ್ನು ಒಳಗೊಂಡಂತೆ ಸಂದರ್ಭಾನುಸಾರ ರಚಿಸಲಾಗುವ ಕುಂದು ಕೊರತೆ ಕೋಶವು ಮನವಿ ಸ್ವೀಕೃತವಾದ 30 ದಿನಗಳೊಳಗೆ ಆದ್ಯತೆಯ ಮೇರೆಗೆ ಇಲಾಖೆಯ ನಿಯಮಗಳ ಚೌಕಟ್ಟಿನಲ್ಲಿ ಮತ್ತು ಸರಕಾರದ ಮಾರ್ಗಸೂಚಿಗಳು ಹಾಗೂ ಚಾಲ್ತಿಯಲ್ಲಿರುವ ನಿಯಮಗಳನ್ನು ಆಧರಸಿ ಸೂಕ್ತ ಆದೇಶ ಹೊರಡಿಸಬೇಕು.
ಶಿಕ್ಷಣ ಇಲಾಖೆಗೆ ಸಂಬಂಧಿಸಿ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪರಿಶೀಲಿಸಲಾಗಿದ್ದು, ಸುಮಾರು 568 ಪ್ರಕರಣಗಳು ಬಾಕಿಯಿದೆ. ಸುಮಾರು 1,131 ಪ್ರಕರಣಗಳಲ್ಲಿ ತೀರ್ಪು ಸ್ವೀಕೃತವಾಗಿದೆ. ಹೀಗಾಗಿ ವಿವಿಧ ಹಂತದ ನ್ಯಾಯಾಲಯ ಪ್ರಕರಣಗಳನ್ನು ಕಾಲಮಿತಿಯೊಳಗೆ ನಿರ್ವಹಿಸಲು, ಇತ್ಯರ್ಥಪಡಿಸಲು ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ(ಆಡಳಿತ) ಇಲಾಕೆಯ ಆಯುಕ್ತ ಡಾ. ಕೆ.ವಿ. ತ್ರಿಲೋಕ್ ಚಂದ್ರ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ನ್ಯಾಯಾಲಯ ಪ್ರಕರಣಗಳ ಸಮರ್ಪಕ ನಿರ್ವಹಣೆ ಸಂಬಂಧ ಜಿಲ್ಲಾ ಉಪನಿರ್ದೇಶಕ(ಆಡಳಿತ) ಕಛೇರಿಯಲ್ಲಿನ ಸಹಾಯಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಬೇಕು. ನೋಡಲ್ ಅಧಿಕಾರಿಗಳು ಚಾಲ್ತಿಯಲ್ಲಿರುವ ಇಲಾಖೆಯ ಕಾಯ್ದೆ, ನಿಯಮಗಳ ಚೌಕಟ್ಟಿನಲ್ಲಿ ಉತ್ತರಗಳನ್ನು ಸಿದ್ದಪಡಿಸಿ, ವಕೀಲರ ಸಮನ್ವಯದೊಂದಿಗೆ ಪ್ರಕರಣಕ್ಕೆ ಅಗತ್ಯವಿರುವ ಕ್ರಮಗಳನ್ನು ನಿರ್ವಹಿಸಬೇಕು.