ಬಿಬಿಎಂಪಿ ತ್ಯಾಜ್ಯ ಸಂಬಂಧಿತ ಶುಲ್ಕ ದುಬಾರಿ: ಸಿ.ಎನ್.ಅಶ್ವತ್ಥನಾರಾಯಣ್ ಆಕ್ಷೇಪ
ಸಿ.ಎನ್.ಅಶ್ವತ್ಥ ನಾರಾಯಣ್
ಬೆಂಗಳೂರು : ಬಿಬಿಎಂಪಿಯು ಕಸದ ತ್ಯಾಜ್ಯಕ್ಕೆ ದುಬಾರಿ ಶುಲ್ಕ ನಿಗದಿಪಡಿಸಿದೆ. ಕೆಜಿ ಲೆಕ್ಕದ ಬದಲಾಗಿ ಚದರಡಿ ಲೆಕ್ಕದಲ್ಲಿ ಶುಲ್ಕ ಪಡೆಯುವುದು ಎಷ್ಟು ಸರಿ ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ, ತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕವನ್ನು ಹೊಸದಾಗಿ ಜಾರಿಗೊಳಿಸಿದೆ. ಬಿಬಿಎಂಪಿ ಆಸ್ತಿ ತೆರಿಗೆಯನ್ನು ಬಹಳಷ್ಟು ಹೆಚ್ಚಿಸಿದೆ. ತ್ಯಾಜ್ಯಕ್ಕೆ ಸೆಸ್ ಇಟ್ಟುಕೊಂಡಿದ್ದಾರೆ. ಬಳಕೆದಾರರ ಶುಲ್ಕ ತುಂಬಾ ದುಬಾರಿ ಇದ್ದು ಅದನ್ನು ಕೈಗೆಟಕುವ ಮಟ್ಟಕ್ಕೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಈಗ ವಿಧಿಸಿದ ಶುಲ್ಕದಿಂದ 2,500 ಕೋಟಿ ರೂ.ಗಳಿಂದ 5 ಸಾವಿರ ಕೋಟಿ ರೂ. ಸಂಗ್ರಹವಾಗಲಿದೆ. ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಯಿಂದ 1 ಸಾವಿರ ಕೋಟಿ ರೂ. ಖರ್ಚಾಗಬಹುದು. ಬರೀ ಬಳಕೆದಾರರ ಶುಲ್ಕದಿಂದ ಭರಿಸಿ ಇದನ್ನೆಲ್ಲ ಮಾಡುತ್ತೇವೆ ಎಂದರೆ ಎಷ್ಟು ಸರಿ? ಆಸ್ತಿ ತೆರಿಗೆಯನ್ನು ಏನು ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ಅಹ್ಮದಾಬಾದ್‍ನಲ್ಲಿ ಒಂದು ಮನೆಗೆ 30 ರೂ.ಶುಲ್ಕ ಇದೆ. ಚೆನ್ನೈಯಂತಹ ನಗರದಲ್ಲಿ 50- 100 ರೂ. ಇದೆ. ಇವರು ತುಂಬಾ ಹೆಚ್ಚಾಗಿ ದರ ನಿಗದಿ ಮಾಡಿದ್ದಾರೆ. ಯಾರ ಜೊತೆಗೂ ಚರ್ಚಿಸದೆ, ಚುನಾಯಿತ ಪ್ರತಿನಿಧಿಯನ್ನು ಕರೆಸಿ ಸಭೆ ನಡೆಸದೇ ಏಕಾಏಕಿ ದರ ನಿಗದಿ ಮಾಡಿರುವುದು ಖಂಡನೀಯ ಎಂದು ಅಶ್ವತ್ಥನಾರಾಯಣ್ ಹೇಳಿದರು.
ಜನರಿಗೆ ಬರೆ ಎಳೆದು, ಅನಾನುಕೂಲ ಮಾಡಿ, ಹೊರೆ ಮಾಡಿ ಅವರನ್ನು ಸಾಕಷ್ಟು ಕಷ್ಟಕ್ಕೆ ಸಿಲುಕಿಸುವ ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಸರಕಾರವು ತ್ಯಾಜ್ಯ ಶುಲ್ಕವನ್ನು ಕಡಿಮೆ ಮಾಡಬೇಕು. ಈಗಾಗಲೇ ತುಂಬ ಜನರು ಪಾಲಿಕೆ ತೆರಿಗೆ ಕಟ್ಟುವುದಿಲ್ಲ ಎಂಬ ಅಭಿಯಾನ ಆರಂಭಿಸಿದ್ದಾರೆ. ಶುಲ್ಕವನ್ನು ಗಮನಿಸಿದರೆ ನಾವು ಅದನ್ನು ಬೆಂಬಲಿಸಬೇಕಾಗುತ್ತದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.