ಬೆಂಗಳೂರು | ಆಟೋ ಖರೀದಿಸಲು ಅಜ್ಜಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಮೊಮ್ಮಗನ ಬಂಧನ
ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಆಟೋ ರಿಕ್ಷಾ ಖರೀದಿಸಲು ತನ್ನ ಅಜ್ಜಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ನಂದಿನಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬಂಧಿತನನ್ನು ಮಿಥುನ್(23) ಎಂದು ಗುರುತಿಸಲಾಗಿದೆ. ವಿಜಯಾನಂದ ಲೇಔಟ್‍ನ ನಿವಾಸಿ ಪುಟ್ನಂಜಮ್ಮ ಎಂಬವರು ನೀಡಿದ ದೂರಿನನ್ವಯ ನಂದಿನಿ ಲೇಔಟ್ ಠಾಣೆಯ ಪೊಲೀಸರು ತನಿಖೆ ನಡೆಸಿ ಮೊಮ್ಮಗ ಮಿಥುನ್‍ನನ್ನು ಬಂಧಿಸಿದ್ದು, ಒಟ್ಟು 81 ಗ್ರಾಂ ಚಿನ್ನಾಭರಣ ಹಾಗೂ 9.44 ಲಕ್ಷ ರೂ. ನಗದು ವಶಕ್ಕೆ ಪಡೆದಿರುವುದಾಗಿ ವಿವರಿಸಿದ್ದಾರೆ.
ಚಾಲಕನಾಗಿದ್ದ ಮಿಥುನ್ ಆಟೋ ರಿಕ್ಷಾ ಕೊಡಿಸುವಂತೆ ಅಜ್ಜಿ ಪುಟ್ನಂಜಮ್ಮ ಅವರಲ್ಲಿ ಸಾಕಷ್ಟು ಬಾರಿ ಕೇಳಿದ್ದಾನೆ. ಇದಕ್ಕೆ ಅವರು ಒಪ್ಪಿರಲಿಲ್ಲ. ಇದರಿಂದ ಬೇಸತ್ತು ಮನೆಯ ಬೀರುವಿನ ಕೀ ನಕಲಿಸಿದ್ದಾನೆ. ಮೇ 1ರಂದು ಹಬ್ಬದ ನಿಮಿತ್ತ ಕುಟುಂಬ ಸಮೇತ ಅಮೃತ್ತೂರಿನ ಹೊಸಪಾಳ್ಯಕ್ಕೆ ಪುಟ್ನಂಜಮ್ಮ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯ ಬೀರುವಿನಲ್ಲಿದ್ದ 10 ಲಕ್ಷ ರೂ. ನಗದು ಹಾಗೂ 125 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.