ಹಾಸ್ಟಲ್‍ಗಳಲ್ಲಿ ಮಕ್ಕಳು ಚಟಗಳಿಗೆ ದಾಸರಾಗುತ್ತಿದ್ದಾರೆ : ಸಭಾಪತಿ ಬಸವರಾಜ ಹೊರಟ್ಟಿ ಆತಂಕ
ಬೆಂಗಳೂರು : ಪೋಷಕರಿಂದ ದೂರು ಇದ್ದು ವ್ಯಾಸಂಗಕ್ಕಾಗಿ ಹಾಸ್ಟಲ್‍ಗಳಿಗೆ ಸೇರುವ ಕೆಲ ಮಕ್ಕಳು ಕೆಟ್ಟ ಚಟಗಳಿಗೆ ದಾಸರಾಗುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಚೈಲ್ಡ್ ಫಂಡ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಬಳಕೆಗಳಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತ ವಿಶೇಷ ಅಧ್ಯಯನದ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಪೋಷಕರು ಶೈಕ್ಷಣಿಕ ಉದ್ದೇಶದಿಂದ ತಮ್ಮ ಮಕ್ಕಳನ್ನು ದೂರ ಇಟ್ಟರೆ ಎಲ್ಲ ಚಟಗಳನ್ನು ತೊರೆದು ಒಳ್ಳೆಯವರಾಗುತ್ತಾರೆ ಎಂದು ಹಾಸ್ಟೆಲ್‍ಗಳಿಗೆ ಸೇರಿಸುತ್ತಾರೆ. ಪೋಷಕರ ಉದ್ದೇಶ ಸರಿ ಇದ್ದರೂ ಸಹ ಕೆಲವೊಂದು ಸಮಯದಲ್ಲಿ ಮಕ್ಕಳು ತಾವು ಮಾಡುವ ಕೃತ್ಯಗಳು ಪೋಷಕರಿಗೆ ತಿಳಿಯುವುದಿಲ್ಲ ಎಂದು ಭಾವಿಸಿ, ಅಲ್ಲಿಯೂ ಸಹ ಹಲವಾರು ಚಟಗಳಿಗೆ ಒಳಗಾಗುತ್ತಾರೆ ಎಂದು ಅವರು ಹೇಳಿದರು.
ಅಷ್ಟೇ ಮಾತ್ರವಲ್ಲದೆ, ಕೆಲವೊಂದು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿ ತಂದೆ ತಾಯಿಯ ಪ್ರೀತಿ ವಾತ್ಸಲ್ಯಗಳಿಂದ ವಂಚಿತರಾಗಿ ಮೊದ ಮೊದಲಿಗೆ ಸಣ್ಣ ಸಣ್ಣ ಅಪರಾಧಗಳನ್ನು ಮಾಡುತ್ತಾ, ಮುಂದೊಂದು ದಿನ ಸಮಾಜದಲ್ಲಿ ದೊಡ್ಡ ಅಪರಾಧಿಗಳಾಗಿ ಬೆಳೆಯುತ್ತಾರೆ. ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತಂದೆ ತಾಯಿಗಳಿಂದ ದೊರೆಯಬೇಕೇ ಹೊರತು ಬೇರೆ ಯಾರಿಂದಲೂ ಅಲ್ಲ. ಆದ್ದರಿಂದ ಆದಷ್ಟು ಪೋಷಕರು ತಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೇ ಪ್ರೀತಿ ವಾತ್ಸಲ್ಯ ತುಂಬಿ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ತಿಳಿಸಿಕೊಟ್ಟಲ್ಲಿ ಸಮಾಜದಲ್ಲಿ ಒಳ್ಳಯ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ಪ್ರಮುಖವಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‍ಗಳಿಗೆ ಹೆಚ್ಚು ಸಂಪರ್ಕ ಹೊಂದಿದ್ದು, ಇದು ಮಕ್ಕಳ ಮೇಲೆ ಗಮನಾರ್ಹ ದುಷ್ಪರಿಣಾಮ ಬೀರುತ್ತಿರುವುದರಿಂದ ಮಕ್ಕಳ ಬಗ್ಗೆ ತಂದೆ ತಾಯಿಗಳು ಹೆಚ್ಚಿನ ಚಿಂತನೆ ಮಾಡಬೇಕು ಎಂದ ಅವರು, ಮಕ್ಕಳ ರಕ್ಷಣಾ ಆಯೋಗವು ಸಹ ಪೋಷಕರಿಗೆ ಮತ್ತು ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯಿಂದಾಗಿ ಆಗುವ ಪರಿಣಾಮಗಳ ಬಗ್ಗೆ ಹಾಗೂ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮತಿಯ ಅಧ್ಯಕ್ಷ ಎನ್.ಎಚ್.ಕೋನರೆಡ್ಡಿ ಮಾತನಾಡಿ, ಸಾಮಾಜಿಕ ಜಾಲತಾಣದಿಂದ ನಮ್ಮ ಮಕ್ಕಳು ಏನೇನು ಅಪಾಯ ಎದುರಿಸುತ್ತಿದ್ದಾರೆ ಎಂಬ ಬಗ್ಗೆ ಫೋಷಕರಾದ ನಾವು ಮೊದಲು ಅರಿತುಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಉತ್ತಮ ವಿಷಯವು ಇದೆ. ಕೆಟ್ಟ ವಿಷಯವು ಇದೆ. ಈ ಬಗ್ಗೆ ಮಕ್ಕಳಿಗೆ ಯಾವುದೇ ಅರಿವು ಇರುವುದಿಲ್ಲ. ಈ ಬಗ್ಗೆ ಪೋಷಕರಾದ ನಾವು ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಆಯೋಗ ಅಧ್ಯಕ್ಷ ಕೆ.ನಾಗಣ್ಣಗೌಡ ಚೈಲ್ಡ್‍ಫಂಡ್ ಇಂಡಿಯಾ ಬೋರ್ಡ್ ಸದಸ್ಯ ರಾಜೇಶ್ ರಂಜನ್ ಸಿಂಗ್ ಸೇರಿದಂತೆ ಪ್ರಮುಖರಿದ್ದರು.