×
Ad

‘ಅಧಿಕ ಪವನ ವಿದ್ಯುತ್ ಸಾಮರ್ಥ್ಯ’ ಕರ್ನಾಟಕಕ್ಕೆ ಪ್ರಥಮ ಸ್ಥಾನ

Update: 2025-06-15 20:31 IST

ಬೆಂಗಳೂರು: ಕರ್ನಾಟಕ ರಾಜ್ಯವು 2024-25ನೇ ಸಾಲಿನಲ್ಲಿ ಪವನ ವಿದ್ಯುತ್ ಕ್ಷೇತ್ರಕ್ಕೆ 1331.48 ಮೆ.ವ್ಯಾ. ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ರವಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಗ್ಲೋಬಲ್ ವಿಂಡ್ ಡೇ-2025 ‘ಪವನ್-ಉರ್ಜಾ: ಪವರಿಂಗ್ ದಿ ಫ್ಯೂಚರ್ ಆಫ್ ಇಂಡಿಯಾ’ ಸಮಾರಂಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶಸ್ತಿ ಸ್ವೀಕರಿಸಿದರು.

2024-25ನೇ ಸಾಲಿನಲ್ಲಿ ಪವನ ವಿದ್ಯುತ್ ವಲಯಕ್ಕೆ 1331.48 ಮೆ.ವ್ಯಾ. ಸಾಮರ್ಥ್ಯ ಸೇಪರ್ಡೆಗೊಳಿಸಿರುವ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದರೆ, 1136.37 ಮೆ.ವ್ಯಾ. ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, 954.74 ಮೆ.ವ್ಯಾ ಸೇರ್ಪಡೆಗೊಳಿಸಿರುವ ಗುಜರಾತ್ ಮೂರನೇ ಸ್ಥಾನದಲ್ಲಿದೆ.

ಕಳೆದ ಸಾಲಿನಲ್ಲಿ ಗುಜರಾತ್ ಮೊದಲ ಸ್ಥಾನ, ಕರ್ನಾಟಕ ಎರಡನೇ ಸ್ಥಾನ ಹಾಗೂ ತಮಿಳುನಾಡು ಮೂರನೇ ಸ್ಥಾನದಲ್ಲಿತ್ತು. ಪ್ರಸಕ್ತ ಸಾಲಿನಲ್ಲಿ ಈ ಎರಡೂ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ರಾಜ್ಯ ಅಗ್ರ ಸ್ಥಾನಕ್ಕೇರಿದೆ ಎಂದು ತಿಳಿಸಲಾಗಿದೆ.

ವಿಶ್ವ ಪವನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ‘2025ರ ಮೇ ವೇಳೆಗೆ ಪವನ ವಿದ್ಯುತ್ತಿನ ಸ್ಥಾಪಿತ ಸಾಮರ್ಥ್ಯ 7,351 ಮೆಗಾವ್ಯಾಟ್ ನಷ್ಟಿತ್ತು. ಕಳೆದ ಆರ್ಥಿಕ ಸಾಲಿನಲ್ಲಿ 1,331 ಮೆಗಾವ್ಯಾಟ್‍ಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದ್ದೇವೆ’ ಎಂದು ತಿಳಿಸಿದರು.

ಇದು ಕೇವಲ ಅಂಕಿ-ಅಂಶವಲ್ಲ. ನಮ್ಮ ಬದ್ಧತೆ, ಯೋಜನೆಗಳನ್ನು ಕಾರ್ಯಗತಗೊಳಿಸುವ ನಮ್ಮ ಸಾಮರ್ಥ್ಯದ ಪ್ರತೀಕ. ರಾಜ್ಯದ ಕೈಗಾರಿಕೆಗಳಿಗೆ, ನಮ್ಮ ರೈತರಿಗೆ, ಮನೆಗಳಿಗೆ ಶುದ್ಧ ಇಂಧನ ಒದಗಿಸುವ ಇಚ್ಛಾ ಶಕ್ತಿಯಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಹೆಜ್ಜೆಗಳು ಹೊಸತೇನಲ್ಲ. 2009ರಲ್ಲಿ ನವೀಕರಿಸಬಹುದಾದ ಇಂಧನ ನೀತಿಯನ್ನು ಪ್ರಕಟಿಸಿದ ದೇಶದ ಮೊದಲ ರಾಜ್ಯ ನಮ್ಮದು ಎಂದರು.

ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರಲ್ಲೂ ಮುಂಚೂಣಿಯಲ್ಲಿದ್ದು, ಹೂಡಿಕೆದಾರರಿಗೆ ರಾಜ್ಯದ ಬಗ್ಗೆ ಇರುವ ವಿಶ್ವಾಸವನ್ನು ಇದು ಎತ್ತಿ ತೋರಿಸುತ್ತದೆ. 2025ರ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ನವೀಕರಿಸಬಹುದಾದ ಇಂಧನ ವಲಯಕ್ಕೆ 4ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಹೂಡಿಕೆ ಒಪ್ಪಂದಗಳಾಗಿವೆ. ಇದು ರಾಜ್ಯವು ಪಡೆದುಕೊಂಡಿರುವ ಒಟ್ಟು ಹೂಡಿಕೆಯ ಸುಮಾರು ಶೇ.40ರಷ್ಟು ಎಂದು ಅವರು ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ‘ಕರ್ನಾಟಕದವನಾಗಿ ರಾಜ್ಯ ಪವನ ವಿದ್ಯುತ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಇದು ಹನುಮನ ಜನ್ಮಭೂಮಿ. ಇಲ್ಲಿ ವಿಶ್ವ ಪವನ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತ ಜಾಗತಿಕವಾಗಿ 4ನೇ ಸ್ಥಾನದಲ್ಲಿದ್ದು, 51.5 ಗಿಗಾವ್ಯಾಟ್ ಸಾಮರ್ಥ್ಯವನ್ನು ಈಗಾಗಲೇ ಸ್ಥಾಪಿಸಲಾಗಿದೆ. 2030ರ ವೇಳೆಗೆ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಶೇ.50ಕ್ಕೆ ಏರಿಸುವ ಜತೆಗೆ 2070ರ ವೇಳೆಗೆ ಇಂಗಾಲದ ಹೊರಸೂಸುವಿಕೆ ನಿವ್ವಳ ಶೂನ್ಯದ ಗುರಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಜೋಶಿ ತಿಳಿಸಿದರು.

ಪಂಪ್ಡ್ ಸ್ಟೋರೇಜ್‍ಗೆ ಒತ್ತು ನೀಡಬೇಕು: ಸದ್ಯದ ಮೂರು ಪ್ರಮುಖ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಬೇಕು. ಮೊದಲನೆಯದಾಗಿ, ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮತ್ತು ಗ್ರಿಡ್ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆ ಜತೆಗೆ ಸಂಗ್ರಹಣೆಯನ್ನು ಸಂಯೋಜಿಸಬೇಕು ಅದಕ್ಕಾಗಿ, ಪಂಪ್ಡ್ ಸ್ಟೋರೇಜ್‍ನಂಥ ವ್ಯವಸ್ಥೆಗೆ ಒತ್ತು ನೀಡಬೇಕು ಎಂದು ಜೋಶಿ ಹೇಳಿದರು.

ಇದೇ ವೇಳೆ, ‘ರ್ಯಾಂಪಿಂಗ್ ಅಪ್ ಲೋಕಲ್ ಮ್ಯಾನುಫ್ಯಾಕ್ಚರಿಂಗ್ ಫಾರ್ ವಿಂಡ್ ಟರ್ಬೈನ್ಸ್ ಇನ್ ಇಂಡಿಯಾ'ವರದಿಯನ್ನು ಪ್ರಹ್ಲಾದ್ ಜೋಶಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್, ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ಕಾರ್ಯದರ್ಶಿ ಸಂತೋಷ್‌ ಕುಮಾರ್ ಸಾರಂಗಿ, ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News