×
Ad

‘ಸಂಧ್ಯಾ ಕಿರಣ ಯೋಜನೆ’ ವಿಸ್ತರಣೆ: ಡಾ.ಶಾಲಿನಿ ರಜನೀಶ್

Update: 2025-06-21 19:50 IST

ಬೆಂಗಳೂರು : ಸರಕಾರಿ ನಿವೃತ್ತ ನೌಕರರಿಗೆ ‘ಸಂಧ್ಯಾ ಕಿರಣ' ಯೋಜನೆ ಜಾರಿಯಲ್ಲಿದೆ. ನಗದು ರಹಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ನಡೆಸಲಾಗುತ್ತಿದ್ದು, ಅದು ಯಶಸ್ವಿಯಾದರೇ ಎಲ್ಲ ಕಡೆ ವಿಸ್ತರಣೆ ಮಾಡಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದರು.

ಶನಿವಾರ ನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ರಾಜ್ಯ ಪರಿಷತ್ ಮಹಾಸಭೆ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‍ಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಿವೃತ್ತ ನೌಕರರ ಆರೋಗ್ಯ ಸುರಕ್ಷತೆಗಾಗಿ ‘ಸಂಧ್ಯಾಕಿರಣ' ಯೋಜನೆ ಜಾರಿಯಲ್ಲಿದೆ. ಚಿಕಿತ್ಸೆ ಪಡೆದು ಬಿಲ್‍ಗಳು ಸಲ್ಲಿಸಿದ ಬಳಿಕ ಮರುಪಾವತಿ ವ್ಯವಸ್ಥೆ ಇದೆ. ಆದರೆ, ಇದನ್ನು ನಗದು ರಹಿತ ಮಾಡುವ ಉದ್ದೇಶದಿಂದ ಪ್ರಾಯೋಗಿಕವಾಗಿ 3 ತಿಂಗಳು ಮಾಡಿ ಎಂದು ಸೂಚನೆ ನೀಡಲಾಗಿದೆ. ಮರುಪಾವತಿಗೂ ಮತ್ತು ನಗದು ರಹಿತ ಸೇವೆ ನೀಡಿದ ಆಸ್ಪತ್ರೆಗಳ ಪಾವತಿಗೆ ಆರ್ಥಿಕ ಹೊರೆ ಯಾವ ರೀತಿ ಇದೆ ಎಂಬುದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಾಲ್ಕೂವರೆ ಲಕ್ಷ ಸರಕಾರಿ ನೌಕರರು ಇದ್ದಾರೆ. ಅದೇ ರೀತಿ ನಾಲ್ಕೂವರೆ ಲಕ್ಷ ನಿವೃತ್ತ ನೌಕರರೂ ಇದ್ದಾರೆ. ನಿವೃತ್ತ ನೌಕರರ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡು ಈಗಲೂ ಸಕ್ರಿಯರಾಗಿದ್ದಾರೆ. ಅಂತಹವರು ಸರಕಾರದ ಕೆಲಸದಲ್ಲಿಯೂ ಸಹಾಯ ಮಾಡಬಹುದು. ತಮ್ಮ ಸಮೀಪದ ಆಸ್ಪತ್ರೆ, ಶಾಲೆ, ಹಾಸ್ಟೆಲ್, ಉದ್ಯಾನ ಮುಂತಾದವುಗಳನ್ನು ದತ್ತು ತೆಗೆದುಕೊಂಡು ನಿರ್ವಹಣೆ ಮಾಡಬಹುದು. ಹಾಲಿ ಸರಕಾರಿ ನೌಕರರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಾ ಅದರ ಅಭಿವೃದ್ದಿಯಲ್ಲಿ ಭಾಗೀದಾರರಾಗಬೇಕು ಎಂದು ಅವರು ಸಲಹೆ ನೀಡಿದರು.

ಕೇಂದ್ರ ಸರಕಾರದಲ್ಲಿಯೂ ಹಿರಿಯ ನಾಗರಿಕರಿಗಾಗಿ ಕೆಲವು ಸೌಲಭ್ಯಗಳು ಲಭ್ಯ ಇವೆ. ಆರೋಗ್ಯ ಮತ್ತು ಜೀವವಿಮೆಯಂತಹ ಸೌಲಭ್ಯಗಳು ಇದ್ದು ಎಲ್ಲರೂ ಅವುಗಳನ್ನು ಬಳಸಿಕೊಳ್ಳಬೇಕು. ನಿವೃತ್ತ ನೌಕರರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸಭೆಗಳನ್ನು ಮಾಡಿ ಸಂಘಕ್ಕೆ ಭರವಸೆ ನೀಡಿದ್ದಾರೆ. ಹೀಗಾಗಿ ಬೇಡಿಕೆಗಳ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಸಿಎಂ ನೀಡಿದ ಸೂಚನೆಗಳನ್ನು ಪಾಲಿಸಲಾಗುವುದು ಎಂದು ಅವರು ತಿಳಿಸಿದರು.

ಆರಂಭದಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಬೈರಪ್ಪ, ನಿವೃತ್ತ ನೌಕರರು ಮತ್ತು ಪಿಂಚಣಿದಾರರಿಗೆ ಸಂಧ್ಯಾಕಿರಣ ನಗದು ರಹಿತ ಆರೋಗ್ಯ ಸೇವೆ ಜಾರಿಗೊಳಿಸಬೇಕು. 70 ವರ್ಷ ಮೇಲ್ಪಟ್ಟ ಮತ್ತು 80 ವರ್ಷದೊಳಗಿನ ನಿವೃತ್ತಿ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಮೂಲ ಪಿಂಚಣಿಯಲ್ಲಿ ಶೇ.10ರಷ್ಟು ಹೆಚ್ಚಳ ಮಾಡಬೇಕು. ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರ ಶವ ಸಂಸ್ಕಾರ ಭತ್ಯೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಸಂಘದ ಹಿರಿಯ ಉಪಾಧ್ಯಕ್ಷೆ ಎಸ್.ಶಾರದಮ್ಮ, ಕಾರ್ಯದರ್ಶಿ ರಂಗೇಗೌಡ, ಖಜಾಂಚಿ ಎಸ್.ಎಂ.ಆನಂದಪ್ಪ, ಮಾಜಿ ಅಧ್ಯಕ್ಷ ಶೇಷಗೌಡ, ಕೇಂದ್ರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News