ಸಾಮೂಹಿಕ ಮದುವೆಗಳಿಂದ ಸಾಮಾಜಿಕ ಸಾಮರಸ್ಯ : ಸಲೀಂ ಅಹ್ಮದ್
ಗದಗ : ಸಾಮೂಹಿಕ ಮದುವೆಗಳು ಇಂದು ಅತ್ಯಂತ ಪ್ರಸ್ತುತವಾಗಿದ್ದು, ಇಂತಹ ಮದುವೆಗಳಿಂದ ಸಾಮಾಜಿಕ ಸಾಮರಸ್ಯ ಬೆಸೆಯುವುದರ ಜೊತೆಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ರವಿವಾರ ಜಿಲ್ಲೆಯ ರೋಣ ತಾಲೂಕಿನ ಕುರುಡಗಿ ಗ್ರಾಮದಲ್ಲಿ ಅಂಜುಮನ್ ಇಸ್ಲಾಂ ಸಮಿತಿ ವತಿಯಿಂದ ನೂತನ ನಫೀಸಾ ಕೌಸರ್ ಮಸೀದಿ ಕಟ್ಟಡದ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ನನಗೆ ಅತ್ಯಂತ ಸಂತೋಷದ ದಿನ. ಒಂದು ನೂತನ ಮಸೀದಿ ಲೋಕಾರ್ಪಣೆ ಇನ್ನೊಂದು ಕಡೆ ನವ ದಂಪತಿಗಳು ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ನೂತನ ದಂಪತಿಗಳ ಭವಿಷ್ಯದ ಬದುಕು ಒಳ್ಳೆಯದಾಗಲಿ ಎಂದು ಹಾರೈಸಿದರು.
ಸಾಮೂಹಿಕ ಮದುವೆ ಇಡೀ ನಾಡಿಗೆ ಮಾದರಿಯಾಗಲಿ. ಇನ್ನು ಗ್ರಾಮದಲ್ಲಿ ಎಲ್ಲ ವರ್ಗದ ಜನರು ಅನ್ಯೋನ್ಯತೆಯಿಂದ ಇದ್ದು ಈ ಕಾರ್ಯಕ್ರಮದಲ್ಲಿ ಜಾತಿ, ಮತ, ಪಂಥ, ಧರ್ಮ ಎನ್ನದೇ ಎಲ್ಲರೂ ಭಾಗವಹಿಸಿದ್ದು ನಿಜಕ್ಕೂ ಮಾದರಿ ಕಾರ್ಯಕ್ರಮ ಆಗಿದೆ. ಇನ್ನು ಗ್ರಾಮದ ಹಿರಿಯರು ಅಂಜುಮನ್ ಇಸ್ಲಾಂ ಸಮಿತಿ ವತಿಯಿಂದ ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಸಹಾಯ ಕೋರಿದ್ದು, ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಈ ವೇಳೆ ಮಾಜಿ ಶಾಸಕ ಬಿ.ಆರ್.ಯಾವಗಲ್, ಮುಖಂಡರಾದ ಚಂದ್ರಶೇಖರ ಜುಟ್ಟಲ್, ಎಸ್.ಡಿ. ಮಕಾಂದಾರ, ವಿವೇಕ ಯಾವಗಲ್, ಲಾಲಸಾಹೇಬ್ ನಧಾಫ್, ಸೈಯದ್ ಖಾಲಿ, ಶಿವನಗೌಡ, ಶೌಕತ್ ಅಲಿ, ಕುಂಬಾರಮಟ್ಟಿ, ಪೀರಸಾಬ್ ನಧಾಪ್ ಸೇರಿದಂತೆ ಇನ್ನಿತರರು ಹಾಜರಿದ್ದರು.