ಸಿಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : ರವಿಕುಮಾರ್ ವಿರುದ್ಧ ಸಭಾಪತಿಗೆ ಕಾಂಗ್ರೆಸ್ ನಿಯೋಗದಿಂದ ದೂರು
ಬೆಂಗಳೂರು: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ತಿನ ವಿಪಕ್ಷ ಬಿಜೆಪಿಯ ಮುಖ್ಯ ಸಚೇತಕ ಎನ್.ರವಿಕುಮಾರ್ ವಿರುದ್ಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ನಿಯೋಗ ದೂರು ಸಲ್ಲಿಸಿದೆ.
ಗುರುವಾರ ಸಭಾಪತಿಗಳನ್ನು ಭೇಟಿಯಾದ ಸಲೀಂ ಅಹ್ಮದ್ ನಿಯೋಗವು, ಎನ್.ರವಿಕುಮಾರ್ ಹೇಳಿಕೆ ಸಾರ್ವಜನಿಕವಾಗಿ ಮತ್ತು ಮಾಧ್ಯಮ/ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಂಡಿದ್ದು, ಅಧಿಕಾರಿಕ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿ ವ್ಯಕ್ತಿತ್ವವನ್ನು ಅವಹೇಳನಗೊಳಿಸುವ ಕೆಲಸವಾಗಿದೆ. ಈ ರೀತಿಯ ಹೇಳಿಕೆಗಳು ಸರಕಾರದ ಅತೀ ಉನ್ನತ ಪದವಿಯ ನಾಗರಿಕ ಸೇವಾಧಿಕಾರಿಗಳ ಧೈರ್ಯ ಮತ್ತು ಪ್ರಾಮಾಣಿಕತೆಗೆ ಚ್ಯುತಿ ತರುತ್ತದೆ" ಎಂದು ಹೇಳಿದೆ.
ರವಿಕುಮಾರ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿಧಾನ ಪರಿಷತ್‌ನ ನಿಯಮಗಳು ಹಾಗೂ ನೈತಿಕ ಮಾರ್ಗಸೂಚಿಗಳ ಪ್ರಕಾರ ರವಿಕುಮಾರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ನಿಯೋಗ ಆಗ್ರಹಿಸಿತು.
ನಿಯೋಗಲ್ಲಿ ಬಿ.ಕೆ.ಹರಿಪ್ರಸಾದ್, ಮಂಜುನಾಥ್ ಭಂಡಾರಿ, ನಾಗರಾಜ ಯಾದವ್, ಬಲ್ಕಿಸ್ ಬಾನು, ರಾಮೋಜಿ ಗೌಡ, ಡಿಟಿ ಶ್ರೀನಿವಾಸ್ ಹಾಗೂ ರಮೇಶ್ ಬಾಬು ಇದ್ದರು.