×
Ad

ರೈತಪರ ನಿಲುವು ತಾಳದಿದ್ದರೆ ದೇಶಾದ್ಯಂತ ರೈತರು ಕರ್ನಾಟಕದತ್ತ : ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಕೆ

Update: 2025-07-03 21:31 IST

ಬೆಂಗಳೂರು : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರ 1,777 ಎಕರೆ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ರಾಜ್ಯ ಸರಕಾರ ಭೂಸ್ವಾಧೀನ ಪಡೆಯಲು ಮುಂದಾಗಿರುವುದನ್ನು ವಿರೋಧಿಸಿ 1186 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹೋರಾಟದ ಕಾವು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ವಾರದಿಂದ ತೀವ್ರಗೊಂಡ ಹಿನ್ನೆಲೆಯಲ್ಲಿ ನಾಳೆ(ಜು.4) ರೈತ ಮುಖಂಡರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದಾರೆ.

ಸಂಯುಕ್ತ ಹೋರಾಟ-ಕರ್ನಾಟಕ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಫ್ರೀಡಂಪಾರ್ಕ್‍ನಲ್ಲಿ ನಡೆಯುತ್ತಿರುವ ಭೂ ಸತ್ಯಾಗ್ರಹ ಹೋರಾಟದ ಸ್ಥಳಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ)ದ ರಾಷ್ಟ್ರೀಯ ನಾಯಕರು ಗುರುವಾರ ಭೇಟಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರೈತಪರವಾದ ನಿಲುವು ತಾಳದಿದ್ದರೆ ಇಡೀ ದೇಶಾದ್ಯಂತ ನಾವು ಸಾವಿರಾರು ರೈತರನ್ನು ಕರೆದುಕೊಂಡು ಕರ್ನಾಟಕದತ್ತ ಮುಖ ಮಾಡಬೇಕಾಗುತ್ತದೆ. ಈ ಹಿಂದೆ ಕೇಂದ್ರ ವಿರುದ್ಧ ಮೂರು ಕಾಯ್ದೆ ವಿರೋಧಿಸಿ ನಡೆಸಿದಂಥ ಬೃಹತ್ ರೈತಕ್ರಾಂತಿ ಮತ್ತೆ ಕರ್ನಾಟಕದಲ್ಲಿ ಮರುಕಳಿಸಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ಕೊಟ್ಟರು.

ಈ ವೇಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ದರ್ಶನ್ ಪಾಲ್, ‘ದಿಲ್ಲಿಯಲ್ಲಿ ಕೇಂದ್ರ ಸರಕಾರದ ಕರಾಳ ಕಾಯ್ದೆಗಳ ವಿರುದ್ಧ 13 ತಿಂಗಳು ನಿರಂತರ ಹೋರಾಟ ನಡೆಸಿ ಗೆಲುವು ಸಾಧಿಸಿದೆವು, ಆದರೆ ಇಲ್ಲಿನ ರೈತರು ಮೂರೂವರೆ ವರ್ಷ ಹೋರಾಡಿದ್ದಾರೆ, ದೇಶಾದ್ಯಂತ ಭೂಸ್ವಾಧೀನ ನಡೆಯುವಾಗ ಪ್ಯಾಕೇಜ್ ಬಗ್ಗೆ ಚರ್ಚೆಯಾಗುತ್ತದೆ, ಆದರೆ ಇಲ್ಲಿನ ರೈತರು ಜಮೀನು ಕೊಡುವುದಿಲ್ಲ ಎಂದು ನಿರ್ಧರಿಸಿ, ಇಂದಿಗೂ ಆ ನಿಲುವಿಗೆ ಬದ್ಧರಾಗಿದ್ದಾರೆ, ಆ ಕಾರಣಕ್ಕೆ ಇದು ವಿಶಿಷ್ಟವಾದ ಹೋರಾಟ’ ಎಂದು ಹೋರಾಟ ನಿರತ ರೈತರನ್ನು ಅಭಿನಂದಿಸಿದರು.

ಬೆಂಗಳೂರು ನಗರಕ್ಕೆ ಇಷ್ಟು ಹತ್ತಿರವಿದ್ದೂ ತಮ್ಮ ಭೂಮಿಯನ್ನು ಬಿಡುವುದಿಲ್ಲವೆಂದು ಸುಮಾರು ಮೂರೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿರುವ ರೈತರಿಗೆ ಅಭಿನಂದನೆಗಳು. ಈ ಹೋರಾಟ ಮಾದರಿಯಾದದ್ದು. ಇತ್ತೀಚೆಗೆ ಸಂಯುಕ್ತ ಕಿಸಾನ್ ಮೋರ್ಚಾದ ಸಭೆ ನಡೆದು ಎರಡು ವಿಚಾರಗಳಿಗೆ ಬೆಂಬಲವನ್ನು ನೀಡಬೇಕೆಂದು ನಿರ್ಧಾರವಾಗಿದೆ, ಮೊದಲನೆಯದ್ದು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ ನೀಡಬೇಕೆಂಬುದು ಹಾಗೆಯೇ ಭೂಸ್ವಾಧೀನಗಳ ವಿರುದ್ಧದ ರೈತರ ಹೋರಾಟವನ್ನು ಬೆಂಬಲಿಸಬೇಕೆಂಬುದು ಎಂದು ದರ್ಶನ್ ಪಾಲ್ ಮಾಹಿತಿ ನೀಡಿದರು.

ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ರೈತ ನಾಯಕ ಡಾ.ಸುನಿಲಮ್ ಮಾತನಾಡಿ, ಈ ರೈತ ಆಂದೋಲನದ ಸಮಯದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ, ದಬ್ಬಾಳಿಕೆ ನಡೆಸಿದ ಪೊಲೀಸರ ಮೇಲೆ ಕಾನೂನು ಕ್ರಮ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ಸಭೆ ಯಶಸ್ವಿಯಾಗುತ್ತದೆಂದು ನಾವು ಭರವಸೆ ಇಟ್ಟಿದ್ದೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಡೀ ದೇಶಾದ್ಯಂತ ಸುತ್ತಾಡಿ ಎನ್‍ಡಿಎ ಸರಕಾರದ ಕರಾಳ ಕಾನೂನುಗಳ ವಿರುದ್ಧ ಮಾತನಾಡುತ್ತಾರೆ. ತಮ್ಮದೇ ಪಕ್ಷದ ಸರಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅವರು ರೈತರಿಗೆ ನ್ಯಾಯ ಸಿಗುವುದನ್ನು ಖಾತ್ರಿ ಪಡಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.

ಹಾಗೆಯೇ ‘ಜನಚಳುವಳಿಗಳ ರಾಷ್ಟ್ರೀಯ ವೇದಿಕೆ’(ಎನ್‍ಎಪಿಎಂ)ಯ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರೂ ಕೂಡಾ ಮುಖ್ಯಮಂತ್ರಿಯವರಿಗೆ ಒಂದು ಪತ್ರ ಬರೆದು ದೇವನಹಳ್ಳಿಯ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರಿಗೆ ನೆನಪಿಸಲು ಬಯಸುತ್ತೇನೆ, ಅವರ ಸರಕಾರ ಅಧಿಕಾರಕ್ಕೆ ಬರಲು ದಾರಿಮಾಡಿಕೊಟ್ಟ ಎಲ್ಲ ಚಳುವಳಿಗಾರರೂ ಇಂದು ದೇವನಹಳ್ಳಿಯ ಹೋರಾಟದ ಜೊತೆಗಿದ್ದಾರೆ. ಇದನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರೆಂದು ನಂಬಿದ್ದೇನೆ ಎಂದು ಡಾ.ಸುನಿಲಮ್ ಹೇಳಿದರು.

ಎಸ್‍ಕೆಎಂನ ರಾಷ್ಟ್ರೀಯ ನಾಯಕ ಯುಧ್‍ವೀರ್ ಸಿಂಗ್ ಮಾತನಾಡಿ, ಸ್ವತಃ ಸಿದ್ದರಾಮಯ್ಯ ಅವರು ಚುನಾವಣೆಗೆ ಮುಂಚೆ ಈ ರೈತರಿಗೆ ಭೂಸ್ವಾಧೀನವನ್ನು ರದ್ದುಪಡಿಸುವ ಭರವಸೆ ನೀಡಿದ್ದಾರೆ. ಈಗ ಆ ಮಾತನ್ನು ಉಳಿಸಿಕೊಳ್ಳಬೇಕಿದೆ, ಸಿದ್ದರಾಮಯ್ಯ ಮಾತನಾಡುವಾಗ ನಮ್ಮಲ್ಲೇ ಒಬ್ಬರೇನೋ ಎಂದು ಅನಿಸುತ್ತದೆ ಹಾಗೆ, ರೈತರ ನಡುವಿನಿಂದ ಹೋದವರೊಬ್ಬರು ಮುಖ್ಯಮಂತ್ರಿಗಳಾದಾಗ ಅವರ ಮೇಲೆ ರೈತರ ನಿರೀಕ್ಷೆ ಬಹಳ ಹೆಚ್ಚಿದೆ. ಇಂತಹ ರಾಜ್ಯದಲ್ಲಿ ರೈತರಿಗೆ ಈ ಸ್ಥಿತಿ ಬರಲೇಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಎಸ್‍ಕೆಎಂನ ರಾಷ್ಟ್ರೀಯ ರೈತ ನಾಯಕ ವಿಜು ಕೃಷ್ಣನ್, ಹಿರಿಯ ಹೋರಾಟಗಾರ ಎಸ್.ಆರ್.ಹಿರೇಮಠ್, ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿನಿಧಿಗಳಾದ ಎಚ್.ಎಂ. ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ಟಿ.ಯಶವಂತ್ ಮಾತನಾಡಿದರು.

ಈ ಹೋರಾಟದ ವಿಚಾರ ಎಸ್‍ಕೆಎಂ ಅಜೆಂಡಾದಲ್ಲಿದೆ: ‘ಇಡೀ ದೇಶದ ರೈತರು, ಹೋರಾಟಗಾರರು ದೇವನಹಳ್ಳಿ ರೈತರ ಜೊತೆಗಿದ್ದಾರೆ, ಸರಕಾರ ಬಿಜಿನೆಸ್ ಮಾಡುವುದಿದ್ದರೆ ಬೇರೆ ಕಡೆ ಮಾಡಲಿ, ರೈತರು ಭೂಮಿ ಕೊಡುವುದಿಲ್ಲ ಎಂದ ಮೇಲೆ ರೈತರಿಗೆ ಅವರ ಭೂಮಿ ಕಸಿಯಲು ಯಾವುದೇ ಅಧಿಕಾರ ಇಲ್ಲ. ದಿಲ್ಲಿಯಲ್ಲಿ ಎಸ್‍ಕೆಎಂ ಸಭೆಯಲ್ಲಿ ಈಗಾಗಲೇ ಈ ಹೋರಾಟದ ವಿಚಾರ ಅಜೆಂಡಾದಲ್ಲಿದೆ, ಒಂದು ವೇಳೆ ಸಿಎಂ ಸಿದ್ದರಾಮಯ್ಯನವರ ಸಭೆಯಲ್ಲಿ ಒಳ್ಳೆಯ ನಿರ್ಧಾರದ ಜೊತೆಗೆ ಹೋರಾಟ ಮುಕ್ತಾಯ ಆಗದಿದ್ದರೆ, ಮುಂದೆಯೂ ಅದನ್ನು ಚರ್ಚೆಯಲ್ಲಿ ಸೇರಿಸಿಕೊಳ್ಳುತ್ತೇವೆ, ಎಸ್‍ಕೆಎಂ ಇಲ್ಲಿನ ರೈತರು ಮತ್ತು ಸಂಘಟನೆಗಳೂ ಏನು ನಿರ್ಧಾರ ಕೈಗೊಂಡರೂ ಅದರ ಜೊತೆಗಿರುತ್ತದೆ’ ಎಂದು ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ತಿಳಿಸಿದರು.

‘ಈ ಸರಕಾರಗಳು ರೈತರ ಓಟಿನಿಂದ ರಚನೆಯಾಗಿವೆ, ಕಾರ್ಪೊ ರೇಟ್‍ಗಳ ಓಟಿನಿಂದ ಅಲ್ಲ, ಯಾವುದಾದರೂ ಸರಕಾರಕ್ಕೆ ಧೈರ್ಯವಿದ್ದರೆ ಅವರು ಹೇಳಿಬಿಡಲಿ, ರೈತರ ಓಟು ನಮಗೆ ಬೇಕಾಗಿಲ್ಲ ಎಂದು’

-ಡಾ.ಸುನಿಲಮ್, ರಾಷ್ಟ್ರೀಯ ರೈತನಾಯಕ, ಎಸ್‍ಕೆಎಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News