×
Ad

‘ಅಕ್ರಮ ಗಣಿಗಾರಿಕೆ’ ಲೋಕಾಯುಕ್ತ ಎಸ್‌ಐಟಿ ಅವಧಿ ವಿಸ್ತರಣೆ

Update: 2025-07-04 20:03 IST

ಬೆಂಗಳೂರು : ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ತನಿಖೆಗಾಗಿ ರಾಜ್ಯ ಲೋಕಾಯುಕ್ತ ಸಂಸ್ಥೆಯಲ್ಲಿ ಸೃಜನೆಗೊಂಡಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಕಾರ್ಯಾವಧಿಯನ್ನು ಸಿಬ್ಬಂದಿ ಮತ್ತು ಮೂಲಭೂತ ಸೌಲಭ್ಯಗಳೊಂದಿಗೆ ಪ್ರಸಕ್ತ ಸಾಲಿನ ಜು.1 ರಿಂದ ಅನ್ವಯವಾಗುವಂತೆ ಒಂದು ವರ್ಷದ ಅವಧಿಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಪ್ರಸ್ತಾವನೆ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಹಾಗೂ ರಾಜ್ಯ ಸರಕಾರದ ಆದೇಶದನ್ವಯ 110 ಪ್ರಕರಣಗಳನ್ನು ದಾಖಲಿಸಿದ್ದು, ಇವುಗಳಲ್ಲಿ 94 ಪ್ರಕರಣಗಳಲ್ಲಿ ಅಂತಿಮ ವರದಿ ದಾಖಲಿಸಲಾಗಿದೆ. ಈವರೆಗೆ 62 ಪ್ರಾಥಮಿಕ ದೋಷಾರೋಪಣಾ ಪಟ್ಟಿಗಳನ್ನು, 28 ಪೂರಕ ದೋಷಾರೋಪಣಾ ಪಟ್ಟಿಗಳನ್ನು ಹಾಗೂ ಕಲಂ 200 ಸಿ.ಆರ್.ಪಿ.ಸಿ ಅಡಿ ಸಲ್ಲಿಸಲಾಗಿರುವ 42 ದೂರುಗಳನ್ನು ಸಕ್ಷಮ ನ್ಯಾಯಾಲಯಗಳ ಮುಂದೆ ದಾಖಲಿಸಲಾಗಿದೆ.

ತನಿಖೆ ಕೈಗೊಂಡ 16 ಸಾರ್ವಜನಿಕ ನೌಕರರ ಪ್ರಕರಣಗಳಲ್ಲಿ ಒಂದು ಪ್ರಕರಣದ ಅಭಿಯೋಜನಾ ಮಂಜೂರಾತಿ ಬಾಕಿಯಿದೆ. 12 ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದೆ ಹಾಗೂ ಕಲಂ 173(8) ಸಿ.ಆರ್.ಪಿ.ಸಿ ಅಡಿ ಪೂರಕ ದೋಷಾರೋಪಣಾ ಪಟ್ಟಿ ಸಲ್ಲಿಸಲು ರಾಜ್ಯ ಸರಕಾರದಿಂದ ರಚಿಸಲಾಗಿರುವ ‘ಅದಿರು ಮೌಲ್ಯಮಾಪನ ಸಮಿತಿ’ಯಿಂದ ವರದಿ ಬರುವುದು ಬಾಕಿಯಿದೆ.

ಈವರೆಗೆ ಕೈಗೊಂಡಿರುವ ತನಿಖೆಯನ್ವಯ 181,41,551.09 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಗಣಿಗಾರಿಕೆ ಮಾಡಿ ಸಾಗಿಸಲಾಗಿದೆ ಎಂದು ತಿಳಿದು ಬಂದಿರುವುದಾಗಿ ತಿಳಿಸಿರುವ ಎಸ್‍ಐಟಿಯ ಪೊಲೀಸ್ ಮಹಾ ನಿರೀಕ್ಷಕ(ಪ್ರಭಾರ)ರ ಕೋರಿಕೆಯಂತೆ ರಾಜ್ಯ ಸರಕಾರ ಎಸ್‍ಐಟಿ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News