×
Ad

'ಬೇಟಿ ಬಚಾವೋ' ಯೋಜನೆ ಇರುವುದೇ ಬಿಜೆಪಿ ನಾಯಕರಿಂದ ಮಹಿಳೆಯರಿಗೆ ರಕ್ಷಿಸಿಕೊಳ್ಳಲು: ಬಿ.ಕೆ.ಹರಿಪ್ರಸಾದ್

Update: 2025-07-09 12:16 IST

ಬೆಂಗಳೂರು: "ಬೇಟಿ ಬಚಾವೋ' ಎಂಬ ಕೇಂದ್ರದ ಯೋಜನೆ ಇರುವುದೇ ಬಿಜೆಪಿ ನಾಯಕರಿಂದ ಮಹಿಳೆಯರಿಗೆ ರಕ್ಷಿಸಿಕೊಳ್ಳಲು ಅಲ್ಲವೇ.? ಅಸಲಿಗೂ ನಾರಿ ಶಕ್ತಿಯಿಂದ ಬೆದರಿ ಬೆಂಡಾಗಿರುವುದು ನಿಮ್ಮದೇ ಪಕ್ಷದ ನಾಯಕರೇ ಹೊರತು ಸಾಮಾನ್ಯ ಜನರಲ್ಲ. ಅಷ್ಟಕ್ಕೂ ನಿಮ್ಮ ಪಕ್ಷದ ಘಟಾನುಘಟಿ 19 ನಾಯಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲು ಯಾವ ನಾರಿ ಶಕ್ತಿ ಅಡ್ಡ ಬಂದಿದೆ ಒಮ್ಮೆ ಜನರಿಗೆ ಹೇಳುವ ಧೈರ್ಯ ಮಾಡಿ" ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.

Full View

ತನ್ನ ವಿರುದ್ಧ ಸುನೀಲ್ ಕುಮಾರ್ 'ಎಕ್ಸ್'ನಲ್ಲಿ ಮಾಡಿರುವ ಟೀಕೆಗೆ 'ಫೇಸ್ ಬುಕ್ ಖಾತೆಯಲ್ಲಿ ತಿರುಗೇಟು ನೀಡಿರುವ ಬಿ.ಕೆ.ಹರಿಪ್ರಸಾದ್, "ನಾನು ಚುನಾವಣಾ ಕಲಿ ಆಗದೇ ಇದ್ದರೂ ಪರವಾಗಿಲ್ಲ, ಆದರೆ ನಿಮ್ಮಂತೆ 'ಪರಶುರಾಮನ' ಕಲಿಯಂತೂ ಆಗಲಾರೆ. ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಧನಾರೀಶ್ವರನ್ನಾದರೂ ಮಾಡಲಿ ಎಂದು ಹೇಳುವ ಬದಲು 'ಅರ್ಧನಾರೀಶ್ವರ ಪ್ರತಿಮೆ' ಮಾಡಲಿ ಎಂದು ಹೇಳಿಕೆ ಕೊಟ್ಟಿದ್ದರೆ ಬಹುಶಃ ನಿಮಿಗೆ ಲಾಭವಾಗುತ್ತಿತ್ತು" ಎಂದು ಕುಟುಕಿದ್ದಾರೆ.

"ನಾರಿ ಶಕ್ತಿ, ನಾರಿ ತತ್ವದ ಉಪದೇಶ ನಿಮ್ಮ ಸಂಘದ ಸರ ಸಂಘ ಸಂಚಾಲಕರಿಗೆ ಮಾಡುವಿರಂತೆ, ಇಲ್ಲಿಯವರೆಗೂ ಬಿಜೆಪಿ ಪಕ್ಷ ಒಬ್ಬೇ ಒಬ್ಬ ಮಹಿಳೆಯನ್ನ ಯಾಕೆ ಅಧ್ಯಕ್ಷರನ್ನಾಗಿ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಇದ್ಯಾ? ಅಥವಾ "ಮಹಿಳೆ ನಾಲ್ಕು ಗೋಡೆಯಲ್ಲೇ ಬದುಕಬೇಕು" ಎಂದು ಮೋಹನ್ ಭಾಗವತ್ ಹೇಳಿಕೆಯಲ್ಲೇ ಉತ್ತರವಿದ್ಯಾ?" ಎಂದು ಪ್ರಶ್ನಿಸಿದ್ದಾರೆ.

"ಮಹಿಳೆಯರಿಗೆ ಗೌರವ ನೀಡುವ, ಸ್ಥಾನಮಾನ ಕೊಡುವ, ಸ್ವಾಭಿಮಾನದ ಬದುಕಿಗೆ ಅರ್ಥ ನೀಡುವ ಯಾವ ಮಾನದಂಡವೂ ಬಿಜೆಪಿಯ ಡಿಎನ್ ಎ ಅಲ್ಲೇ ಇಲ್ಲ. ಅಷ್ಟಕ್ಕೂ ರಾಮ-ಪರಶುರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಮಾಯಕ ಜನರ ತೆರಿಗೆ ಹಣವನ್ನು ಜೇಬಿಗೆ ಇಳಿಸಿಕೊಂಡಂತೆ ಸುಲಭವಲ್ಲ ನಾರಿ ಶಕ್ತಿ ಬಗ್ಗೆ ಮಾತಾಡುವುದು. ಕರಾವಳಿಯ ಬಿಜೆಪಿ ಯುವಕರ ಪಟಾಲಂ ಮಹಿಳೆಯರನ್ನ, ಯುವತಿಯರನ್ನ ಯಾಮಾರಿಸಿ ಅತ್ಯಾಚಾರ ನಡೆಸಿ ಮೋಸ ಮಾಡುತ್ತಿರುವುದರ ವಿರುದ್ಧ ತುಟಿ ಬಿಚ್ಚದ ನಿಮಿಗೆ ಅದ್ಯಾವ ನಾರಿ ಶಕ್ತಿ, ನಾರಿ ತತ್ವದ ಬಗ್ಗೆ ಮಾತಾಡುವ ನೈತಿಕತೆ ಇದೆ?" ಎಂದು ಟೀಕಾ ಪ್ರಹಾರ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News