ಕೆಐಎಡಿಬಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಎರಡು ಬಾರಿ ಪರಿಹಾರ: ಆರೋಪಿ ಈ.ಡಿ. ವಶಕ್ಕೆ
ಬೆಂಗಳೂರು : ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಲ್ಲಿ ಎರಡು ಬಾರಿ ಪರಿಹಾರ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿ ರವಿಯಲ್ಲಪ್ಪ ಕುರ್ಬೆಟ್‍ನನ್ನು ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ದಾಖಲೆಗಳಿಂದ ಧಾರವಾಡದ ಕೆಐಎಡಿಬಿಯಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಯೋಜನೆಯಲ್ಲಿ ಆರೋಪಿ ರವಿ ಯಲ್ಲಪ್ಪ ಕುರ್ಬೆಟ್ ಸಕ್ರಿಯವಾಗಿ ಭಾಗಿಯಾಗಿರುವುದು ಖಚಿತವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಸುಮಾರು 13 ಕೋಟಿ ರೂ.ಗಳ ಮೊತ್ತದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಈ.ಡಿ. ತಿಳಿಸಿದೆ.
ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010-12ರ ಅವಧಿಯಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ನೀಡಿದ್ದರು. ಆದರೆ, 2021-22ರಲ್ಲಿ ಮತ್ತೆ ಹಲವು ಜಮೀನುಗಳಿಗೆ ಎರಡನೇ ಬಾರಿ 19.99 ಕೋಟಿ ರೂ. ಪರಿಹಾರ ನೀಡಿದ್ದರು. ಈ ಹಿನ್ನೆಲೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ.ಡಿ. ಕೂಡಾ ದೂರು ದಾಖಲಿಸಿಕೊಂಡಿತ್ತು. ಒಟ್ಟು 72 ಕೋಟಿ ರೂ. ಅಕ್ರಮ ಮಾಡಲಾಗಿದೆ ಎಂದು ಈ.ಡಿ. ತನಿಖೆಯಲ್ಲಿ ಪತ್ತೆಯಾಗಿತ್ತು.