×
Ad

ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ಬೆಂಬಲ; ರಾಜ್ಯ ಸರಕಾರಕ್ಕೆ ಪತ್ರ ಬರೆದ ಹಲವು ಸಂಘಟನೆಗಳು

Update: 2025-07-13 21:15 IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ 1,777ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ, ‘ಪ್ರಾಣವಾದರೂ ಬಿಡುತ್ತೇವೆ, ಭೂಮಿ ಬಿಡುವುದಿಲ್ಲ’ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು 1,196 ದಿನಗಳಿಂದ ಅನಿರ್ದಿಷ್ಠಾವಧಿ ಹೋರಾಟ ನಡೆಸುತ್ತಿದ್ದು, ಇದೀಗ ಹೋರಾಟಕ್ಕೆ ದೇಶವ್ಯಾಪಿ ಬೆಂಬಲ ವ್ಯಕ್ತವಾಗಿದೆ.

ರವಿವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಯುಕ್ತ ಹೋರಾಟ-ಕರ್ನಾಟಕ, ‘ಜು.4ರಂದು ಸಿಎಂ ಸಿದ್ದರಾಮಯ್ಯ ರೈತ ನಿಯೋಗದೊಂದಿಗೆ ಮಾತುಕತೆ ನಡೆಸಿ, ಜು.15ರಂದು ಸರಕಾರದ ತೀರ್ಮಾನವನ್ನು ತಿಳಿಸುತ್ತೇವೆ ಎಂದು ಹೇಳಿದ್ದರು. ಆದರೆ ಇದೀಗ ಚನ್ನರಾಯಪಟ್ಟನ ರೈತ ಹೋರಾಟ ರಾಷ್ಟ್ರವ್ಯಾಪಿಯ ಹೋರಾಟವಾಗಿ ತಿರುವು ಪಡೆದುಕೊಂಡಿದ್ದು ದೇಶಾದ್ಯಂತ ಬಲವಂತದ ಭೂಸ್ವಾಧೀನವನ್ನು ವಿರೋಧಿಸಿ ಹಲವು ರಾಜ್ಯಗಳಿಂದ ಬೆಂಬಲ ವ್ಯಕ್ತಪಡಿಸಿ ಪ್ರತ್ಯೇಕವಾಗಿ ಪತ್ರದ ಮೂಲಕ ಸರಕಾರಕ್ಕೆ ಒತ್ತಾಯ ಮಾಡಿರುವುದಾಗಿ ತಿಳಿಸಿದೆ.

ಕಾಶ್ಮೀರದ ಆರ್‌ಟಿಐ ಮೂಮೆಂಟ್, ಗುಜರಾತನ ಮಜ್ದೂರ್ ಅಧಿಕಾರ್ ಮಂಚ್, ಉತ್ತರ ಪ್ರದೇಶದ ಸಾಜ್ಹಿ ದುನಿಯಾ ಮತ್ತು ಕಿಸಾನ್ ಏಕ್ತಾ ಕೇಂದ್ರ, ಉತ್ತರಾಖಾಂಡದ ಚೇತನಾ ಆಂದೋಲನಾ, ಪಶ್ಚಿಮ ಬಂಗಾಳದ ಪಶ್ಚಿಮ ರಾಧಾನಗರ್ ಸಂದರ್ಬನ್ ಜನಸ್ರಮಾಜಿ ಮಂಚ್, ಮಧ್ಯಪ್ರದೇಶದ ಕಿಸಾನ್ ಸಂಘರ್ಷ ಸಮಿತಿ, ಕೇರಳ ದೇಶೀಯ ಮಾನವಿಕ ವೇದಿ, ತಮಿಳುನಾಡಿನ ಎಸ್‍ಕೆಎಮ್, ಸಂಯುಕ್ತ ಕಿಸಾಸ್ ಮೋರ್ಚಾ, ಜನಮುಕ್ತಿ ಸಂಘರ್ಷ ವಾಹಿನಿ, ಕಿಸಾನ್ ಸಭಾ ಸಂಘಟನೆ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್, ಎನ್‍ಎಪಿಎಮ್, ಅಲೈನ್ಸ್ ಅಗೆನೆಸ್ಟ್ ಕರಪ್ಷನ್ ಸಂಘಟನೆ ಸೇರಿದಂತೆ ದೀರ್ಘಕಾಲ ಭೂ ಚಳವಳಿ ಅನುಭವವುಳ್ಳ ಮೇಧಾಪಾಟ್ಕರ್, ಪ್ರಕಾಶ್ ಕಮ್ಮರಡಿ, ಸಿಪಿಐಎಂಎಲ್‍ನ ಸಂಸದ ರಾಜಾ ರಾಮ್ಸಿಂಗ್ ಇತರರು ಕರ್ನಾಟಕ ಸರಕಾರಕ್ಕೆ ಪತ್ರ ಬರೆದು ಆಗ್ರಹಿಸಿರುವುದಾಗಿ ಸಂಯುಕ್ತ ಹೋರಾಟ-ಕರ್ನಾಟಕ ಹೇಳಿದೆ.

ಈ ಬಗ್ಗೆ ಕರ್ನಾಟಕ ಸರಕಾರಕ್ಕೆ ಪತ್ರ ಬರೆದಿರುವ ಎಸ್‍ಕೆಎಂ ಮುಖಂಡ ಡಾ. ಸುನೀಲಂ, ಚನ್ನರಾಯಪಟ್ಟಣದ ರೈತರು ಭೂಮಿ ಉಳಿಸಿಕೊಳ್ಳಲು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇವೆ. ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಕರ್ನಾಟಕದ ರೈತರು ಮತ್ತು ನಾಗರಿಕ ಸಮಾಜ ಮಹತ್ವದ ಪಾತ್ರ ವಹಿಸಿದ್ದಾರೆ. ರೈತರನ್ನು ದಮನಿಸುವುದು ಕಾಂಗ್ರೆಸ್ ಪಾಲಿಗೆ ರಾಜಕೀಯವಾಗಿ ಆತ್ಮಾಹುತಿ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಸರಕಾರಕ್ಕೆ ಪತ್ರ ಬರೆದಿರುವ ಉತ್ತರ ಪ್ರದೇಶದ ಸಾಝಿ ದುನಿಯಾ ಸಂಘಟನೆಯ ನಿಯೋಗ, ಜನರನ್ನು ಒಕ್ಕಲೆಬ್ಬಿಸಿ ಅವರ ಜೀವನೋಪಾಯದ ಸಾಧನಗಳನ್ನು ಹಾಳುಗೆಡವಿ ಮಾಡುವ ಯಾವುದೇ ಅಭಿವೃದ್ಧಿ ನಿಜವಾದ ಅಭಿವೃದ್ಧಿಯಲ್ಲ. ಅಭಿವೃದ್ಧಿ ಎಂದರೆ ಮಾನವ ಕಲ್ಯಾಣಕ್ಕಾಗಿ ಆಗಿರಬೇಕೇ ಹೊರತು, ಮಾನವರನ್ನು ಸಂಕಷ್ಟಕ್ಕೆ ಸಿಲುಕಿಸುವ ಮೂಲಕ ಅಲ್ಲ. ಭೂಸ್ವಾಧೀನದ ವಿರುದ್ಧ ಈ ಹಿಂದೆ ಆಶ್ವಾಸನೆ ನೀಡಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರವೇ ಅದನ್ನು ಉಲ್ಲಂಘಿಸುತ್ತಿರುವುದು ದುರಂತ. ರೈತರ ಒಪ್ಪಿಗೆಯಿಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆ ನಿಲ್ಲಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News