×
Ad

ದೇವನಹಳ್ಳಿ ಹೋರಾಟ ಇತಿಹಾಸ ದಾಖಲಿಸಿದೆ : ಬಡಗಲಪುರ ನಾಗೇಂದ್ರ

Update: 2025-07-15 19:47 IST

 ಬಡಗಲಪುರ ನಾಗೇಂದ್ರ

ಬೆಂಗಳೂರು : ದೇವನಹಳ್ಳಿ-ಚನ್ನರಾಯಪಟ್ಟಣ ರೈತರ ಹೋರಾಟ ಇತಿಹಾಸ ದಾಖಲಿಸಿದೆ. ರಾಜ್ಯದಲ್ಲಿ ಮುಂದಿನ ಯಾವುದೇ ಭೂ ಹೋರಾಟಗಳಿಗೆ ದೇವನಹಳ್ಳಿಯ ರೈತರ ಹೋರಾಟ ಮಾದರಿಯಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದರು.

ಮಂಗಳವಾರ ನಗರದ ಗಾಂಧಿಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೂ ಭೂಮಿಗೂ ಬಿಡಿಸಲಾಗದ ಸಂಬಂಧವಿದೆ. ಅದನ್ನು ಯಾವ ಸರಕಾರ, ಕಾರ್ಪೋರೇಟ್ ಕುಳಗಳೂ ದೂರ ಮಾಡಲು ಸಾಧ್ಯವಿಲ್ಲ ಎಂದರು.

ಕರ್ನಾಟಕದ ಸಮಸ್ತ ಚಳುವಳಿಗಳು, ಹೋರಾಟಗಾರರು, ಕಾರ್ಮಿಕರು, ಬುದ್ಧಿಜೀವಿಗಳು, ಕಲಾವಿದರು ಸೇರಿದಂತೆ ಹಲವಾರು ಮಂದಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದೇವನಹಳ್ಳಿಯ ರೈತರ ಹೋರಾಟದ ಪರವಾಗಿ ಕೆಲಸ ಮಾಡಿದ್ದರಿಂದ ಜಯವನ್ನು ಸಾಧಿಸಲು ಕಾರಣವಾಗಿದೆ. ಮುಂದೆ ಕರ್ನಾಟಕದ ಅಭಿವೃದ್ಧಿ ಮಾದರಿಗೆ ನಾವು ಶಿಬಿರವನ್ನು ಮಾಡಬೇಕು. ಈ ಮೂಲಕ ರಾಜ್ಯದ ನೆಲ-ಜಲವನ್ನು ಉಳಿಸುವ ಕೆಲಸವಾಗಬೇಕು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಮಾತು ಉಳಿಸಿಕೊಂಡ ಸಿದ್ದರಾಮಯ್ಯ: 2022ರ ಸೆಪ್ಟೆಂಬರ್‍ನಲ್ಲಿ ಸರಕಾರ ಭೂಮಿ ಹೋರಾಟವನ್ನು ದಮನಿಸಲು ನಡೆಸಿದ ಪೊಲೀಸ್ ದೌರ್ಜನ್ಯ ವಿರೋಧಿಸಿ, ಕೃಷಿ ಭೂಮಿ ಸ್ವಾಧೀನ ಖಂಡಿಸಿ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಆಯೋಜಿಸಿತ್ತು. ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ರೈತರು ಸರಕಾರದ ಗಮನ ಸೆಳೆದಿದ್ದರು. ಆ ವೇಳೆ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ‘ರೈತರ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಮಾಡಬಾರದು, ಚನ್ನರಾಯಪಟ್ಟಣದ ರೈತರು ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. ಆದುದರಿಂದ ನಾನು ಮತ್ತು ನಮ್ಮ ಪಕ್ಷ ರೈತರನ್ನು ಬೆಂಬಲಿಸುತ್ತೇವೆ. ನಾವು ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ಕೈಬಿಡುತ್ತೇನೆ’ ಎಂದು ಮಾತುಕೊಟ್ಟಿದ್ದರು. ಇಂದು ಭೂಸ್ವಾಧೀನ ಪ್ರಕ್ರಿಯೆ ಕೈಬಿಡುಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ’

ಒಗ್ಗೂಡಿದರೆ ಮಾತ್ರವೇ ಹೋರಾಟಕ್ಕೆ ಯಶಸ್ಸು: ‘ಹಸಿರು, ನೀಲಿ ಮತ್ತು ಕೆಂಪು ಬಾವುಟಗಳು ಒಟ್ಟಾದ ಕಾರಣಕ್ಕೆ ದೇವನಹಳ್ಳಿ ರೈತ ಹೋರಾಟಕ್ಕೆ ಜಯ ಸಿಕ್ಕಿದೆ. ಎಲ್ಲ ಚಳುವಳಿಗಳು ಒಗ್ಗಟ್ಟಾಗಬೇಕು ಆಗ ಮಾತ್ರ ಒಂದು ಹೋರಾಟ ಯಶಸ್ಸು ಕಾರಣ ಸಾಧ್ಯ’

-ಎಸ್.ವರಲಕ್ಷ್ಮೀ, ಹೋರಾಟಗಾರ್ತಿ, ಸಂಯುಕ್ತ ಹೋರಾಟ-ಕರ್ನಾಟಕ.

ಕೆಂಪು ನನ್ನ ರಕ್ತ, ಹಸಿರು ನನ್ನ ಉಸಿರು: ‘ನಾನು ದಲಿತರ ಹುಡುಗ. ನನ್ನ ನಾಯಕತ್ವವನ್ನು ಯಾರು ಒಪ್ಪುತ್ತಿದ್ದರೋ, ಇಲ್ಲವೋ ಗೊತ್ತಿಲ್ಲ.…ಆದರೆ, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಎಲ್ಲ ಸಮುದಾಯದವರು ನನ್ನ ನಾಯಕತ್ವವನ್ನು ಒಪ್ಪಿಕೊಂಡರು. ಇದು ಈ ನಾಡಿನ ಜನಚಳವಳಿಯ ವಿಜಯ. ಈ ನಾಡಿನ ಜನಚಳವಳಿ ನಿಜವಾಗಿಯೂ ಗೆದ್ದಿದೆ. ಈ ಗೆಲುವನ್ನು ಇನ್ನಷ್ಟು ದಿನ ಕಾಪಿಟ್ಟುಕೊಳ್ಳಬೇಕಿದೆ. ನನ್ನೊಳಗೆ ‘ನೀಲಿ’ ಮಾತ್ರ ಇತ್ತು, ಈಗ ‘ಕೆಂಪು’ ನನ್ನ ರಕ್ತವಾಗಿದೆ, ಹಸಿರು ನನ್ನ ಉಸಿರಾಗಿದೆ’

-ಕಾರಳ್ಳಿ ಶ್ರೀನಿವಾಸ್ ಮುಖಂಡರು, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ

ಸುಳ್ಳು ಮೊಕದ್ದಮೆ ಹಿಂಪಡೆಯಿರಿ: ‘ಚನ್ನರಾಯಪಟ್ಟಣ ರೈತರ ನ್ಯಾಯಬದ್ಧ ಹಾಗೂ ಕಾನೂನು ಬದ್ದ ಹಕ್ಕೊತ್ತಾಯಗಳನ್ನು ಈಡೇರಿಸಲು ಮೀನಮೇಷ ಎಣಿಸುತ್ತಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೊನೆಗೂ ಐಕ್ಯ ಹೋರಾಟಕ್ಕೆ ಮಣಿದು ಭೂಸ್ವಾಧೀನ ಸಂಪೂರ್ಣವಾಗಿ ರದ್ದುಪಡಿಸುವ ಘೋಷಣೆ ಮಾಡಿದೆ. ಪಟ್ಟು ಬಿಡದ ಹೋರಾಟ ಅಂತಿಮವಾಗಿ ಜಯಗಳಿಸುತ್ತದೆ ಎಂಬ ವಿಶ್ವಾಸವನ್ನು ವೃದ್ದಿಸಿದೆ. ಈ ರೈತರ ಮೇಲೆ ಹಾಕಿರುವ ಎಲ್ಲ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು. ಹೋರಾಟದಲ್ಲಿ ಭಾಗವಹಿಸುವ ವೇಳೆ ಅಪಘಾತದಿಂದ ನಿಧನರಾದ ರೈತ ಅಂಜನಪ್ಪ ಹಾಗೂ ಹೃದಯಾಘಾತದಿಂದ ಸಾವನ್ನಪ್ಪಿದ ಗುಂಡ್ಲುಪೇಟೆ ತಾಲೂಕಿನ ಈಶ್ವರಪ್ಪ ಕುಟುಂಬಕ್ಕೆ ಪರಿಹಾರ ನೀಡಬೇಕು’

-ಯು.ಬಸವರಾಜ್ ಅಧ್ಯಕ್ಷರು ಕರ್ನಾಟಕ ಪ್ರಾಂತ ರೈತ ಸಂಘ

ಕುಣಿದು ಕುಪ್ಪಳಿಸಿದ ಮುಖಂಡರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಭೂಮಿ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಭೂ ಸ್ವಾಧೀನ ವಿರೋಧಿ ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅಲ್ಲದೆ, ತಮಟೆ ಸದ್ದಿಗೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News