×
Ad

ಡಿಸಿಎಂ ವಿಶೇಷ ಅಧಿಕಾರಿಯಿಂದ ಅನುಚಿತ ವರ್ತನೆ ಆರೋಪ : ಮಹಿಳಾ ಆಯೋಗಕ್ಕೆ ದೂರು

Update: 2025-07-26 20:44 IST
ಸಾಂದರ್ಭಿಕ ಚಿತ್ರ

ಬೆಂಗಳೂರು : ಹೊಸದಿಲ್ಲಿ ಕರ್ನಾಟಕದ ಭವನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಶೇಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಆಂಜನೇಯ ಅವರು ಅನುಚಿತ ವರ್ತನೆ ಹಾಗೂ ಅಗೌರವದಿಂದ ಕಾಣುತ್ತಿದ್ದಾರೆ ಎಂದು ಆರೋಪಿ ಪರಿಶಿಷ್ಟ ಜಾತಿಯ ಮಹಿಳಾ ಸಿಬ್ಬಂದಿಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಕರ್ನಾಟಕ ಭವನದಲ್ಲಿ ಉಪ ಸಮನ್ವಯಾಧಿಕಾರಿ ಮತ್ತು ಪ್ರಭಾರಿ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರು ದೂರು ಸಲ್ಲಿಕೆ ಮಾಡಿದ್ದು, ಅಸುರಕ್ಷಿತ ವಾತಾವರಣದಲ್ಲಿ ಕೆಲಸ ನಿರ್ವಹಿಸುವ ಪ್ರಸಂಗ ಬಂದಿರುವುದು ವಿಷಾದನೀಯ ಎಂದು ಉಲ್ಲೇಖಿಸಿದ್ದಾರೆ.

ಎಚ್.ಆಂಜನೇಯ ಪ್ರಸ್ತುತ ಕರ್ನಾಟಕ ಭವನದಲ್ಲಿ ಕಚೇರಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಚೇರಿಯ ವಿಚಾರದಲ್ಲಿ ಲೆಕ್ಕ ಶಾಖೆಯ ಸಿಬ್ಬಂದಿಯನ್ನು ಕರೆದು ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲದೇ 'ಲೆಕ್ಕಾಧಿಕಾರಿ ಏನು ಕತ್ತೆ ಕಾಯುತ್ತಿದ್ದಾಳಾ' ಎಂದು ಆಗೌರವದಿಂದ ಮಾತನಾಡಿ ನಿಂದಿಸಿದ್ದಾರೆ.ಉಪ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಎಂಬ ದರ್ಪದಿಂದ ಪ್ರತಿ ದಿನ ಕಚೇರಿಯ ಕರ್ತವ್ಯದ ಅವಧಿಯಲ್ಲಿ ನೌಕರರಿಗೆ ಪ್ರತಿ ಮಾತು ಮಾತಿಗೂ ಅವಹೇಳನ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನೌಕರರನ್ನು ಅಗೌರವದಿಂದ ಕಾಣುವುದಲ್ಲದೇ ಅಸಭ್ಯವಾದ ಅಶ್ಲೀಲವಾದ ಕೆಟ್ಟ ಪದಗಳನ್ನು ಉಪಯೋಗಿಸುತ್ತಾರೆ. ಮಹಿಳಾ ಸಿಬ್ಬಂದಿಗೂ ಅಸಭ್ಯ ಪದಗಳಿಂದ ಮಾತನಾಡುತ್ತಾರೆ.ಅಲ್ಲದೇ, ನಿಮ್ಮನ್ನು ಅಮಾನತು ಮಾಡುತ್ತೇನೆ, ವಜಾಗೊಳಿಸುತ್ತೇನೆ ಎಂದು ಹೇಳಿ ನೌಕರರಿಗೆ ಬೆದರಿಕೆ ಹಾಕುತ್ತಾರೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಯೋಗ ಮುಂದಾಗಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News