×
Ad

ಬೆಂಗಳೂರು | ಪತ್ರ ಬರೆದಿಟ್ಟು ಏಳನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

Update: 2025-08-04 21:29 IST

ಬೆಂಗಳೂರು : ಪತ್ರ ಬರೆದಿಟ್ಟು ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಬನಶಂಕರಿ 3ನೇ ಹಂತದ ಬನಗಿರಿ ನಗರದಲ್ಲಿ ವರದಿಯಾಗಿದೆ.

ಗಣೇಶ್ ಪ್ರಸಾದ್ ಎಂಬುವರ ಪುತ್ರ ಗಂಧಾರ್(14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಸಂಗೀತ ಕಲಾವಿದರಾದ ಗಣೇಶ್ ಪ್ರಸಾದ್ ಅವರಿಗೆ ಇಬ್ಬರು ಮಕ್ಕಳಿದ್ದು, ಈ ಪೈಕಿ ಗಂಧಾರ್ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಆ.3ರ ರಾತ್ರಿ ಎಂದಿನಂತೆ ಊಟ ಮಾಡಿ ಗಂಧಾರ್ ಮಲಗಿದ್ದಾನೆ. ಆ.4ರ ಬೆಳಗ್ಗೆ ಎಷ್ಟು ಹೊತ್ತಾದರೂ ತನ್ನ ರೂಮ್‍ನಿಂದ ಹೊರಗೆ ಬಂದಿಲ್ಲ. ಶಾಲೆಗೆ ಕಳುಹಿಸುವ ಸಲುವಾಗಿ ಮಗನನ್ನು ಎಬ್ಬಿಸಲು ತಂದೆ ರೂಮ್ ಬಳಿ ಹೋಗಿ ಕೂಗಿದರೂ ಹೊರಗೆ ಬಂದಿಲ್ಲ. ತಕ್ಷಣ ಬಾಗಿಲು ತಳ್ಳಿ ನೋಡಿದಾಗ ಗಿಟಾರ್ ನೇತು ಹಾಕುವ ಮೊಳೆಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ತಿಳಿದು ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದು, ಈ ವೇಳೆ ಗಂಧಾರ್ ಮಲಗಿದ್ದ ರೂಮ್‍ನಲ್ಲಿ ‘ನನಗೆ ಕ್ಷಮಿಸಿ’ ಎಂದು ಬರೆದಿರುವ ಪತ್ರವೊಂದು ಕಂಡುಬಂದಿದೆ. ಅದನ್ನು ವಶಕ್ಕೆ ಪಡೆದು ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಸಿ.ಕೆ. ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News