ಕೇಂದ್ರ ಬಿಜೆಪಿ ಸರಕಾರ ಶಿಕ್ಷಣವನ್ನು ಸಂಪೂರ್ಣವಾಗಿ ಧ್ವಂಸ ಮಾಡುತ್ತಿದೆ: ಬಿ.ಕೆ.ಹರಿಪ್ರಸಾದ್ ಆಕ್ರೋಶ

''ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲೇ ಈ ಪ್ರಶ್ನೆಪತ್ರಿಕೆ ಸೋರಿಕೆ''

Update: 2026-07-19 16:25 IST

ಬೆಂಗಳೂರು, ಜು.19: ಶಿಕ್ಷಣ ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಇದನ್ನು ಕೇಂದ್ರ ಬಿಜೆಪಿ ಸರಕಾರ ಸಂಪೂರ್ಣವಾಗಿ ಧ್ವಂಸ ಮಾಡುತ್ತಿದೆ. ಪ್ರಶ್ನೆಪತ್ರಿಕೆ ಕೇವಲ ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲ ಇಡೀ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೊಷಕರು ಉಪವಾಸ ಬಿದ್ದು, ಸಾಲ ಮಾಡಿ ಓದಿಸಿದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಆ ಮಕ್ಕಳಿಗೆ ಅನ್ಯಾಯವಾದರೆ ಆ ಕುಟುಂಬ ಹಾಗೂ ವಿದ್ಯಾರ್ಥಿಗಳ ಪರಿಸ್ಥಿತಿ ಏನು? ಕರ್ನಾಟಕದಲ್ಲೂ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಲಾಗಿತ್ತು. ಇದರ ವಿರುದ್ಧ ಪ್ರತಿಭಟನೆ ಮಾಡಿದ ಕಾರಣಕ್ಕೆ ನನ್ನ ಮೇಲೆ ಕೇಸ್ ದಾಖಲಾಗಿತ್ತು. ಇತ್ತೀಚೆಗಷ್ಟೇ ನ್ಯಾಯಾಲಯ ಅದನ್ನು ರದ್ದುಗೊಳಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉತ್ತರ ಭಾರತದ ಶೈಕ್ಷಣಿಕ ಹಬ್ ಎಂದೇ ಪರಿಗಣಿಸಲಾಗಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಕುರಿತು ಹಾಗೂ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ರಾಹುಲ್ ಗಾಂಧಿ ಅವರು Chhatron ki Goonj (ವಿದ್ಯಾರ್ಥಿಗಳ ಧ್ವನಿ) ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಕೆಲವು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. 2014ರಿಂದ 2026ರವರೆಗೆ 152 ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಉತ್ತರ ಭಾರದ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ಆತಂತಕಕ್ಕೆ ಸಿಲುಕಿವೆ. ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲೇ ಈ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದ್ದು, ಇದರ ಫಲಾನುಭವಿಗಳು ಬಿಜೆಪಿ ನಾಯಕರ ಮಕ್ಕಳಾಗಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ನಾಯಕರ ಮಕ್ಕಳಿಂದಲೇ ಪೊಲೀಸರು ಸೋರಿಕೆಯಾದ ಪ್ರಶ್ನೆಪತ್ರಿಕೆ ವಶಕ್ಕೆ ಪಡೆದಿದ್ದಾರೆ. ಇದು ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ಮಾತ್ರವಲ್ಲ. ಭಾರತದ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆ ಪ್ರಶ್ನೆಯಾಗಿದೆ ಎಂದು ಹೇಳಿದರು.

1947ರಲ್ಲಿ ಈದೇಶದ ಸಾಕ್ಷರತೆ ಪ್ರಮಾಣವನ್ನು 76%ಗೆ ಏರಿಕೆ ಮಾಡಲಾಗಿದ್ದು, 15 ವಿವಿಗಳಿಂದ 560 ವಿವಿ ಮಾಡಲಾಗಿದೆ. ಐಐಟಿ, ಐಐಎಂ, ಐಐಎಸ್, ಏಮ್ಸ್ ನಂತಹ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ದೇಶದ ಲಕ್ಷಾಂತರ ಹಾಗೂ ಕೋಟ್ಯಂತರ ಮಕ್ಕಳ ಭವಿಷ್ಯಕ್ಕಾಗಿ ನಿರ್ಮಿಸಿರುವ ಶಿಕ್ಷಣ ಕ್ಷೇತ್ರದ ಮೇಲೆ ದೊಡ್ಡ ದಾಳಿಯಾಗಿದೆ. ಇದು ಆತಂಕಕಾರಿ ವಿಚಾರ.

ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲವೂ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದೆ, ಪ್ರಶ್ನೆ ಪತ್ರಿಕೆ ಸೋರಿಕೆಗೂ ಬಿಜೆಪಿಗೂ ಇರುವ ಸಂಬಂಧವೇನು? ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದ್ದರೆ ಮತ್ತೊಂದೆಡೆ ಪ್ರಧಾನ ಮಂತ್ರಿಗಳು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಮಾಡುತ್ತಾರೆ. ನಕಲಿ ಪದವಿ ಪ್ರಮಾಣಪತ್ರ ಇಟ್ಟುಕೊಂಡಿರುವ ಪ್ರಧಾನಮಂತ್ರಿಗಳು ಮಕ್ಕಳ ಭವಿಷ್ಯ ಅಪಾಯಕ್ಕೆ ಸಿಲುಕಿಸಿದ್ದಾರೆ. ಮಕ್ಕಳ ಭವಿಷ್ಯ ಉಜ್ವಲವಾದರೆ ಮಾತ್ರ, ದೇಶದ ಭವಿಷ್ಯ ಉಜ್ವಲವಾಗುತ್ತದೆ.

ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಕೇಳುವ ಪ್ರಶ್ನೆಗಳೆಂದರೆ

10 ವರ್ಷಗಳಲ್ಲಿ ಎಷ್ಟು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ?

152 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯಾಗಿವೆಯೇ?

ತನಿಖೆ ಬಳಿಕ ಎಷ್ಟು ಜನರಿಗೆ ಶಿಕ್ಷೆ ನೀಡಲಾಗಿದೆ?

ಈ ಪ್ರಕರಣದಲ್ಲಿ ಎಷ್ಟು ಜನ ಸಂಚುಕೋರರು ಜೈಲು ಸೇರಿದ್ದಾರೆ?

ಪದೇ ಪದೆ ಇಂತಹ ಪ್ರಕರಣ ನಡೆಯುತ್ತಿರುವುದೇಕೆ ಎಂದು ಪ್ರಧಾನಮಂತ್ರಿ ಉತ್ತರಿಸಬೇಕು?

ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ ರಕ್ಷಣೆ ನೀಡುತ್ತಿರುವವರು ಯಾರು?


ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಶ್ನೆಗಳು:

ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿರುವ ಸಂದರ್ಭದಲ್ಲಿ ಈ ಬಗ್ಗೆ ನಿಮಗೆ ಅರಿವಿದೆಯೇ?

ಪ್ರಶ್ನೆ ಪತ್ರಿಕೆ ಸೋರಿಕೆ ಶಿಕ್ಷಣ ಇಲಾಖೆ ವಿಚಾರವೋ ಅಥವಾ ವೈಯಕ್ತಿಕ ವಿಚಾರವೋ?

ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಿಲ್ಲ ಯಾಕೆ?

ಈ ಎಲ್ಲಾ ಅಂಶಗಳಿಂದಾಗಿ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡುವುದು ಒಳ್ಳೆಯದು.

ಪ್ರಮುಖ ಆಗ್ರಹಗಳು:

ಈ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಗಂಭೀರವಾದ ತನಿಖೆ ನಡೆಯಬೇಕು.

ಈ ಎಲ್ಲಾ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ರಾಷ್ಟ್ರೀಯ ತನಿಖೆ ಆಗಬೇಕು.

ಈ ತನಿಖೆಯಲ್ಲಿ ಯಾವುದೇ ರಾಜಕೀಯ ಪ್ರಭಾವ ಇರಬಾರದು.

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ಕಾಂಗ್ರೆಸ್ ಪಕ್ಷದ ಹೋರಾಟ ಒಂದು ಪರೀಕ್ಷೆಗಾಗಿ ಅಲ್ಲ, ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ. 2004ರಲ್ಲಿ ಯುಪಿಎ ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಕಾನೂನು ತಂದು 1ರಿಂದ 12ನೇ ತರಗತಿವರೆಗೂ ಉಚಿತ ಶಿಕ್ಷಣ ನೀಡಿತು. ಆಮೂಲಕ ಶಿಕ್ಷಣ ಮೂಲಭೂತ ಹಕ್ಕು ಎಂದು ಸಾಬೀತುಪಡಿಸಿತು.

ಕೇಂದ್ರ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಭರವಸೆ ನೀಡಿ ಅವರ ಭವಿಷ್ಯದ ಕಡೆ ಗಮನಹರಿಸಬೇಕು. ಈ ದೇಶದ ಭವಿಷ್ಯ, ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಗಡಿ ಭಾಗಕ್ಕಿಂತ ಶಾಲಾ ತರಗತಿಯಲ್ಲಿ ನಿರ್ಧಾರವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಬೇಕು ಎಂದವರು ಆಗ್ರಹಿಸಿದರು.

ಈ ವಿಚಾರವಾಗಿ ಕರ್ನಾಟಕದಲ್ಲಿ ಹೋರಾಟ ನಡೆಯಲಿದೆಯೇ ಎಂದು ಕೇಳಿದಾಗ, “ಈಗಾಗಲೇ ಹೋರಾಟಗಳು ನಡೆಯುತ್ತಲೇ ಇವೆಯಲ್ಲ. ನಾವು ಈ ವಿಚಾರದಲ್ಲಿ ಹೋರಾಟ ಮಾಡುತ್ತೇವೆ. ರಾಹುಲ್ ಗಾಂಧಿ ಕರ್ನಾಟಕದ ವಿದ್ಯಾರ್ಥಿಗಳ ಜೊತೆ ಚರ್ಚೆ ಮಾಡಲು ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.

ಕೇಂದ್ರ ಶಿಕ್ಷಣ ಸಚಿವರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಅಧಿವೇಶನದಲ್ಲಿ ಉತ್ತರ ನೀಡುವರೇ ಎಂದು ಕೇಳಿದಾಗ, “ನಾವು ಈ ವಿಚಾರವಾಗಿ ಸಂಸತ್ತಿನಲ್ಲೂ ಹೋರಾಟ ಮಾಡುತ್ತೇವೆ. ಇದು ಕೇವಲ ಬಿಜೆಪಿ ವಿಚಾರವಲ್ಲ, ದೇಶದ ಮಕ್ಕಳ ಭವಿಳ್ಯದ ವಿಚಾರ. ಬಿಜೆಪಿ ನಾಯಕರ ಮಕ್ಕಳನ್ನು ತೇರ್ಗಡೆಗೊಳಿಸಲು ಈ ಪ್ರಶ್ನೆಪತ್ರಿಕೆ ಸೋರಿಕೆ ಮಾಡುತ್ತಿದ್ದಾರೆ. ಸರ್ಕಾರವು ಇದಕ್ಕಿಂತ ನೀಚತನವನ್ನು ತೋರಿಸಲು ಸಾಧ್ಯವಿಲ್ಲ” ಎಂದರು.

ನೀಟ್ ಪರೀಕ್ಷೆ ಬಗ್ಗೆ ಅವರಿಗೆ ಗಂಭೀರತೆ ಯಾಕಿಲ್ಲ ಎಂಬ ವಿಚಾರವಾಗಿ ಕೇಳಿದಾಗ, “ಅವರಿಗೆ ಮಕ್ಕಳ ಭವಿಷ್ಯದ ವಿಚಾರದಲ್ಲಿ ಗಂಭೀರತೆ ಇದ್ದಿದ್ದರೆ ಅವರು ಕೋಮುಗಲಭೆಗಳಿಗೆ ಪ್ರಚೋದನೆ ನೀಡುವುದಿಲ್ಲ. ಅವರು ಪ್ರಚಾರಕ್ಕೆ ಪ್ರತಿ ನಿತ್ಯ ಐದು ವಿವಿ ಆರಂಭಿಸುತ್ತಿದ್ದೇವೆ ಎಂದರು.

ಎಲ್ಲಿ ಆರಂಭಿಸಿದ್ದಾರೆ ತೋರಿಸಲಿ ನೋಡೋಣ. ಅವರಿಂದ ಕಾಲೇಜು ಆರಂಭಿಸಲು ಸಾಧ್ಯವಾಗದೇ ಇರುವ ಕಾಲೇಜು ಮುಚ್ಚುತ್ತಿದ್ದಾರೆ” ಎಂದು ಕಿಡಿಕಾರಿದರು.

ಪ್ರಧಾನ ಮಂತ್ರಿಯ ವಿದೇಶಿ ಪ್ರವಾಸದ ಬಗ್ಗೆ ಕೇಳಿದಾಗ, “ಪ್ರಧಾನ ಮಂತ್ರಿ ವಿದೇಶ ಪ್ರವಾಸ ಮಾಡುತ್ತಲೇ ಇರುತ್ತಾರೆ. ಎಪ್ಸ್ಟೀನ್ ಫೈಲ್ ನಲ್ಲಿ ಅವರ ವಿಚಾರವನ್ನು ಮುಚ್ಚಿಕೊಳ್ಳು ಅವರು ಆಗ್ಗಾಗ್ಗೆ ವಿದೇಶಿ ಪ್ರವಾಸ ಮಾಡುತ್ತಿರುತ್ತಾರೆ. ಸಂಸತ್ತಿನಲ್ಲಿ ಈ ವಿಚಾರವಾಗಿ ಶಿಕ್ಷಣ ಸಚಿವರು ಅಥವಾ ಬೇರೆ ಯಾರಾದರೂ ಉತ್ತರ ನೀಡಬೇಕು. ಅದಕ್ಕಾಗಿ ಹೋರಾಟ ನಡೆಯಲಿದೆ”ಎಂದರು.

ಸೋನಮ್ ವಾಂಗ್ಚುಕ್ ಅವರ ಪ್ರತಿಭಟನೆ ಬಗ್ಗೆ ಕೇಳಿದಾಗ, “ಅವರ ಪ್ರತಿಭಟನೆ ಬಗ್ಗೆ ಸರಕಾರದಿಂದ ಯಾರೊಬ್ಬರೂ ಹೋಗಿ ವಿಚಾರಿಸಿಲ್ಲ. ಇದು ದುರಂತವೇ ಸರಿ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆಯೂ ಚರ್ಚೆ ಇಲ್ಲ, ನಿರಶನ ಮಾಡುತ್ತಿರುವ ಸೋನಮ್ ಅವರನ್ನು ತೆರವುಗೊಳಿಸಿರುವುದು ದೊಡ್ಡ ದುರಂತ” ಎಂದರು.

ನಿಮ್ಮ ಪದಗ್ರಹಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು ಎಂದಪ ಸಂಸದರು ಈಗ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ, “ಅವರಿಗೆ ಈ ವಿಚಾರವಾಗಿ ಮಾತನಾಡುವ ಯೋಗ್ಯತೆ ಇಲ್ಲ. ನಾವು ಜವಾಬ್ದಾರಿ ಹೊತ್ತು ತೊಂದರೆ ಅನುಭವಿಸಿದ ಮೂವರು ವಿದ್ಯಾರ್ಥಿಗಳನ್ನು ವಿಚಾರಿಸಿದೆವು. ಅದಕ್ಕೆ ಅವರದೇ ಆದ ಕಾರಣವಿತ್ತೇ ವಿನಹ ನಮ್ಮ ಕಾರ್ಯಕ್ರಮದಿಂದ ಆಗಿದ್ದಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಯಾವ ಗ್ರಹಣ ಹಿಡಿದಿದೆ ಎಂದು ಬಿಜೆಪಿ ಸಂಸದರು ಉತ್ತರಿಸಬೇಕು” ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಯಾವ ರೀತಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೀರಿ ಎಂದು ಕೇಳಿದಾಗ, “ಯುವ ಕಾಂಗ್ರೆಸ್, ವಿದ್ಯಾರ್ಥಿ ಘಟಕದಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಮೊನ್ನೆ ಶಿವಮೊಗ್ಗದಲ್ಲಿ 10 ಸಾವಿರ ವಿದ್ಯಾರ್ಥಿಗಳನ್ನು ಸೇರಿಸಿ ಕಾರ್ಯಕ್ರಮ ಮಾಡಿದ್ದೇವೆ. ನೀಟ್ ಪರೀಕ್ಷೆ ಅಕ್ರಮದಿಂದ 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರಕ್ಕೆ ಸಿಲುಕಿದೆ” ಎಂದರು.

ಈ ಪ್ರಕರಣದಲ್ಲಿ ಕಾಂಗ್ರೆಸ್ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತಿವೆಯೇ ಎಂದು ಕೇಳಿದಾಗ, “ಅವರು ದೇಶದಲ್ಲಿ ನೂರು ವರ್ಷಗಳ ಕಾಲ ಸುಳ್ಳು ಹೇಳಿಕೊಂಡೆ ಜನರನ್ನು ಮರಳು ಮಾಡಿಕೊಂಡು ಬಂದಿದ್ದಾರೆ. ಅವರ ಸಂಘಟನೆಗಳು, ಮರಿ ಸಂಘಟನೆಗಳು ದೇಶದ ಜನರಿಗೆ ಮಂಕುಬೂದಿ ಎರಚಿದ್ದಾರೆ. ಅವರು ದೇವರ ಹೆಸರಲ್ಲಿ ಲೂಟಿ ಹೊಡೆಯುವ ಹುಂಡಿಕಳ್ಳರು. ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ?” ಎಂದು ಹರಿಹಾಯ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News