ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ಮಾಡಬೇಕು: ಬಿ.ಕೆ. ಹರಿಪ್ರಸಾದ್
ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ಮಾಡಬೇಕು. ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭೆ, ವಿಧಾನ ಪರಿಷತ್ತಿನಲ್ಲೂ ಈ ಕುರಿತು ಹೋರಾಟ ಮುಂದುವರೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಿಂದ ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು, ಆತ್ಮಹತ್ಯೆ ಪರಿಹಾರವಲ್ಲ ಎಂಬ ಸಂದೇಶ ಸಾರಲು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ (ಕೆಪಿವೈಸಿಸಿ) ವತಿಯಿಂದ ಶನಿವಾರ ಬೆಂಗಳೂರಿನ ಕೆಪಿಸಿಸಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಮತ್ತು ತಮಿಳುನಾಡು ನೀಟ್ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ರಾಜ್ಯಗಳಿಗೆ ಕೊಡಬೇಕು ಎಂದು ಒತ್ತಡ ಹೇರಿದ್ದವು. ಆದರೆ, ಕೇಂದ್ರ ಸರಕಾರ ನೀಟ್ ಜಾರಿಗೊಳಿಸಿ ಪರೀಕ್ಷಾ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಅದನ್ನು ಸರಿಪಡಿಸಲು ಬಹಳ ವರ್ಷಗಳೇ ಬೇಕು. ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಯಾವ ಸರಕಾರ ಬೇಕೇಂದು ನೀವೇ ನಿರ್ಧರಿಸಬೇಕು. ಶಿಕ್ಷಣ ಭವಿಷ್ಯದ ಹಾದಿ, ಶಿಕ್ಷಣದಿಂದ ಉಜ್ವಲ ಭವಿಷ್ಯ ಸಾಧ್ಯ. ಶಿಕ್ಷಣದಿಂದ ಪ್ರಭುತ್ವವನ್ನು ಪ್ರಶ್ನಿಸುವ ಧೈರ್ಯ ಬರುತ್ತದೆ. ಪ್ರಶ್ನಿಸುವುದರಿಂದಲೇ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಒಂದೇ ಒಂದು ಪರೀಕ್ಷೆಯಲ್ಲೂ ಅಕ್ರಮ ಸಂಭವಿಸಲು ಬಿಡುವುದಿಲ್ಲ. ದೇಶದ ಯುವಕರ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ನಮ್ಮ ಗುರಿಯಾಗಿದ್ದು, ಅದನ್ನು ಸಾಕಾರಗೊಳಿಸುತ್ತೇವೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗುವುದು ಸರಕಾರದ ವೈಫಲ್ಯದಿಂದಾಗಿ. ಶಿಕ್ಷಣ ಕ್ಷೇತ್ರಕ್ಕೆ ಪೆಟ್ಟು ಬಿದ್ದರೆ ದೇಶದ ಭವಿಷ್ಯ ಸದೃಢವಾಗಿರುವುದಿಲ್ಲ. ಹೀಗಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ಮಾಡಬೇಕು ಎಂದರು.
ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಮಾತನಾಡಿ, ಇಂದು ದೇಶದ ಶಿಕ್ಷಣ ವ್ಯವಸ್ಥೆ ಪಾರದರ್ಶಕ ರಹಿತವಾಗಿದ್ದು, ಅಕ್ರಮಗಳ ಜಾಲ ತಿಳಿದಿದ್ದರೂ ನಮ್ಮ ಕೇಂದ್ರ ಸರಕಾರ ಜಾಣ ಮೌನ ವಹಿಸಿದೆ. ಅಕ್ರಮವಿಲ್ಲದೆ ಒಂದೇ ಒಂದು ಪರೀಕ್ಷೆ ನಡೆಸಲು ಸಾಧ್ಯವಿಲ್ಲದವರು, ವಿಕಸಿತ ಭಾರತದ ಕುರಿತು ಮಾತನಾಡುತ್ತಿದ್ದಾರೆ. ಧಮೇರ್ಂದ್ರ ಪ್ರಧಾನ್ ರಾಜೀನಾಮೆ ನೀಡದಿರುವುದು ಕೇಂದ್ರ ಸರಕಾರಕ್ಕೆ ನಾಚಿಕೆಯ ವಿಷಯ ಎಂದು ಟೀಕಿಸಿದರು. ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.
ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ ಧ್ವನಿ) ಅಭಿಯಾನದ ಹಕ್ಕೊತ್ತಾಯಗಳು
- ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.
- ಎನ್‍ಟಿಎ ವ್ಯವಸ್ಥೆಯ ವಿರುದ್ಧ ಸಮಗ್ರ ತನಿಖೆ ಮತ್ತು ಸುಧಾರಣೆ ಆಗಬೇಕು.
- ಪರೀಕ್ಷೆಗಳು, ಫಲಿತಾಂಶಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಸಿದ್ಧಪಡಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.