ನೀಟ್ ಅಕ್ರಮದಿಂದ ವಿದ್ಯಾರ್ಥಿಗಳ ನಂಬಿಕೆ ಕುಸಿದಿದೆ: ಬಿ.ಕೆ. ಹರಿಪ್ರಸಾದ್

ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ಕಾಂಗ್ರೆಸ್ ಬದ್ಧ; ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು

Update: 2026-07-18 15:09 IST

Photo credit : X@HariprasadBK2

ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳಿಂದ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತು ಆತ್ಮವಿಶ್ವಾಸ ಕಳೆದುಕೊಂಡಿರುವ ವಿದ್ಯಾರ್ಥಿಗಳೊಂದಿಗೆ ಇಂದು ಭರವಸೆಯ ಮಾತುಗಳನ್ನಾಡಿದೆ ಎಂದು ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಭವನದಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ವಿದ್ಯಾರ್ಥಿ–ಯುವ ಸಂವಾದದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳ ಆತಂಕ, ಅನಿಶ್ಚಿತತೆ, ನಿರೀಕ್ಷೆಗಳು ಹಾಗೂ ಶಿಕ್ಷಣ ವ್ಯವಸ್ಥೆಯ ಕುರಿತ ಕಳವಳಗಳನ್ನು ಮುಕ್ತವಾಗಿ ಹಂಚಿಕೊಂಡರು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಕನಸುಗಳನ್ನು ರಕ್ಷಿಸುವುದು ಹಾಗೂ ಪಾರದರ್ಶಕ, ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆಯನ್ನು ಖಾತ್ರಿಪಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ದೇಶದ ಯುವಜನತೆಯ ಭವಿಷ್ಯಕ್ಕೆ ಧಕ್ಕೆ ತಂದಿರುವ ಕೇಂದ್ರದ ಬಿಜೆಪಿ ಸರ್ಕಾರದ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಪಕ್ಷ ಸದಾ ದೃಢವಾಗಿ ನಿಲ್ಲಲಿದೆ ಎಂದು ಅವರು ತಿಳಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಾಗಿ “ಛಾತ್ರೋಂ ಕಿ ಗೂಂಜ್” ಅಭಿಯಾನದ ಮೂಲಕ ವಿದ್ಯಾರ್ಥಿಗಳಿಗೆ ಭರವಸೆ ಮೂಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿ-ಯುವಜನತೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಹರಿಪ್ರಸಾದ್ ಕರೆ ನೀಡಿದ್ದಾರೆ.

ಈ ಸಂವಾದದಲ್ಲಿ ರಾಜ್ಯಸಭಾ ಸದಸ್ಯ ಮನ್ಸೂರ್ ಖಾನ್ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News