×
Ad

‘ತುಂಗಭದ್ರಾ ನೀರು ವಿಚಾರ’ ಆಂಧ್ರ ಸಿಎಂ ಜತೆ ಸಭೆ : ಪವನ್ ಕಲ್ಯಾಣ್

Update: 2025-05-22 00:23 IST

ಬೆಂಗಳೂರು : ತುಂಗಭದ್ರಾ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಗಮನಕ್ಕೆ ತಂದು ಸಭೆ ನಡೆಸುವ ಪ್ರಯತ್ನ ಮಾಡುತ್ತೇನೆ ಎಂದು ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಹೇಳಿದ್ದಾರೆ.

ಬುಧವಾರ ಇಲ್ಲಿನ ವಿಧಾನಸೌಧದ ಪೂರ್ವದ್ವಾರದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಕೃಷ್ಣ, ಅಭಿಮನ್ಯು, ರಂಜನ್ ಮತ್ತು ದೇವ ಎಂಬ ನಾಲ್ಕು ಆನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಭೆ ನಡೆಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ನಾನು ಅರಣ್ಯ ಇಲಾಖೆ ಸಚಿವರಿಗೆ ಧನ್ಯವಾದ ಹೇಳುತ್ತೇನೆ. ಆಂಧ್ರ ಪ್ರದೇಶ 30 ವರ್ಷಗಳಿಂದ ಮಾನವ-ಆನೆ ಸಂಘರ್ಷದ ಸಮಸ್ಯೆ ಎದುರಿಸುತ್ತಿದೆ. ಸಂಘರ್ಷ ತಡೆಗೆ ಕರ್ನಾಟಕ ಉತ್ತಮ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಆನೆಗಳನ್ನು ಕೇಳಿದ್ದೆವು. ನಮ್ಮ ಮನವಿಗೆ ಕರ್ನಾಟಕ ಸರಕಾರ ಒಪ್ಪಿದೆ. ಇದಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ನುಡಿದರು.

ಈ ಬೆಳವಣಿಗೆಯಿಂದ ಆಂಧ್ರ ಪ್ರದೇಶ-ಕರ್ನಾಟಕದ ಉತ್ತಮ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ ಎಂದ ಅವರು, ನಮ್ಮ ಬಳಿ ಎರಡು ಕುಮ್ಕಿ ಆನೆ ಇವೆ. ಆದರೆ, ಆ ಆನೆಗಳಿಗೆ ವಯಸ್ಸಾಗಿದೆ, ಅಷ್ಟು ಶಕ್ತಿ ಇಲ್ಲ. ಹೀಗಾಗಿ ಕುಮ್ಕಿ ಆನೆಗಳಿಗೆ ಮನವಿ ಮಾಡಿದ್ದೆವು. ಕರ್ನಾಟಕ ಸರಕಾರ ಅವುಗಳನ್ನು ಕೊಟ್ಟಿದ್ದು, ಧನ್ಯವಾದ ಹೇಳುತ್ತೇನೆ ಎಂದರು.

ತುಂಗಾಭದ್ರ ನದಿಯ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಜತೆ ಸಭೆ ನಿಗದಿ ಮಾಡಿಕೊಡಿ.ಆಂಧ್ರ ಮತ್ತು ನಮ್ಮ ರಾಜ್ಯದ ಸಂಬಂಧ ಇನ್ನೂ ಉತ್ತಮವಾಗಲಿ. ನಮ್ಮ ಪಾಲಿನ 24 ಟಿಎಂಸಿ ನೀರಿನ ಬಳಕೆ ಬಗ್ಗೆ ನಿಮ್ಮ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಬೇಕಿದೆ. ನೀವೇ ಮುಂದೆ ನಿಂತು ಸಭೆ ನಿಗದಿ ಮಾಡಿ ಎಂದು ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಮನವಿ ಮಾಡಿದ್ದೇನೆ.

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News