×
Ad

ಯಡಿಯೂರಪ್ಪ ವಿರುದ್ಧದ ಪೊಕ್ಸೊ ಪ್ರಕರಣ; ವಿಚಾರಣಾ ನ್ಯಾಯಾಲಯದ ಕ್ರಮ ಎತ್ತಿ ಹಿಡಿದ ಹೈಕೋರ್ಟ್

ಮಾಜಿ ಮುಖ್ಯಮಂತ್ರಿಗೆ ಭಾರೀ ಹಿನ್ನಡೆ

Update: 2025-11-13 15:32 IST

ಬಿ.ಎಸ್. ಯಡಿಯೂರಪ್ಪ (Photo: PTI)

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ಕಾಗ್ನೈಜೆನ್ಸ್ (ವಿಚಾರಣೆಗೆ ಪರಿಗಣಿಸಿದ) ತೆಗೆದುಕೊಂಡ ಹಾಗೂ ಸಮನ್ಸ್ ಜಾರಿ ಮಾಡಿದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದರಿಂದ, ಯಡಿಯೂರಪ್ಪರಿಗೆ ಭಾರಿ ಹಿನ್ನಡೆಯಾಗಿದ್ದು, ಪ್ರಕರಣದ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಕಾಗ್ನೈಜೆನ್ಸ್ ತೆಗೆದುಕೊಂಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳಾದ ಬಿ.ಎಸ್.ಯಡಿಯೂರಪ್ಪ, ಎಂ.ಅರುಣ್, ಎಂ.ರುದ್ರೇಶ ಹಾಗೂ ಜಿ.ಮರಿಸ್ವಾಮಿ ಸಲ್ಲಿಸಿದ್ದ ಅರ್ಜಿಗಳ ಕುರಿತು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.

ಆದೇಶದಲ್ಲೇನಿದೆ?

ಪ್ರಕರಣದಲ್ಲಿ ಸಂಜ್ಞೆ ಪರಿಗಣಿಸಿ, ಸಮನ್ಸ್ ಜಾರಿ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿಯಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಯಡಿಯೂರಪ್ಪರನ್ನು ಅನಗತ್ಯವಾಗಿ ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸಬಾರದು. ಅರ್ಜಿದಾರರ ಉಪಸ್ಥಿತಿ ಅಗತ್ಯವಿಲ್ಲದಿದ್ದರೆ ವಿಚಾರಣೆಗೆ ಹಾಜರಾತಿಯಿಂದ ವಿನಾಯಿತಿ ಕೋರಿ ಸಲ್ಲಿಸುವ ಮನವಿಯನ್ನು ವಿಚಾರಣಾ ನ್ಯಾಯಾಲಯ ಪುರಸ್ಕರಿಸಬೇಕು ಎಂದು ಆದೇಶದಲ್ಲಿ ಹೇಳಿದೆ.

ಈ ಆದೇಶದಲ್ಲಿ ಅವಲೋಕಿಸಿರುವ ಅಂಶಗಳ ಪ್ರಭಾವಕ್ಕೆ ಒಳಗಾಗದೇ ತನ್ನ ಮುಂದೆ ಇರುವ ಸಾಕ್ಷಿಗಳನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ಪ್ರಕರಣ ನಿರ್ಧರಿಸಬೇಕು. ಆರೋಪ ಕೈಬಿಡುವುದೂ ಸೇರಿ ಯಾವುದೇ ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಏನಿದು ಪ್ರಕರಣ

ತಮ್ಮ ಬೆಂಗಳೂರಿನ ಡಾಲರ್ಸ್‌ ಕಾಲನಿಯ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು 2024ರ ಮಾರ್ಚ್‌ ನಲ್ಲಿ ಆರೋಪ ಕೇಳಿ ಬಂದಿತ್ತು. ಬಾಲಕಿಯ ತಾಯಿಯ ಆರೋಪದ ಬಳಿಕ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News