Photo: x/@ojasbhandarii
ಬೆಂಗಳೂರು : ಪಾಕಿಸ್ತಾನಿ ಧಾರಾವಾಹಿ ‘ದಾರ್-ಎ-ನಿಜಾತ್' ಸಂಬಂಧಿಸಿದಂತೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರದರ್ಶನ ಮತ್ತು ಕಾರ್ಯಕ್ರಮವನ್ನು ಬೆಂಗಳೂರು ನಗರ ಪೊಲೀಸರ ಸೂಚನೆ ಮೇರೆಗೆ ಆಯೋಜಕರು ರದ್ದುಗೊಳಿಸಿದ್ದಾರೆ.
ಧಾರಾವಾಹಿ ‘ದಾರ್-ಎ-ನಿಜಾತ್' ಪ್ರದರ್ಶನಗಳ ಕುರಿತು ಆನ್ಲೈನ್ನಲ್ಲಿ ಪ್ರಚಾರ ಪೋಸ್ಟರ್ ಗಳು ಹರಿದಾಡುತ್ತಿದ್ದವು. ‘ದಿ ಬ್ಲೂಮ್ ಸೊಸೈಟಿ ಸಿಸ್ಟರ್ಸ್ ಕ್ಲಬ್' ವತಿಯಿಂದ ನವೆಂಬರ್ 28ರ ಶನಿವಾರದಂದು ಸಂಜೆ 6:00 ಗಂಟೆಯಿಂದ ಫ್ರೇಝರ್ ಟೌನ್ನಲ್ಲಿರುವ ‘ಶೀಷ್ ಕಬಾಬ್' ರೆಸ್ಟೋರೆಂಟ್ನಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ ಧಾರಾವಾಹಿಯ 34 ಮತ್ತು 35ನೆ ಸಂಚಿಕೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು ಮತ್ತು ಇದರೊಂದಿಗೆ ಪರ್ಷಿಯನ್ ಹಾಗೂ ಅರೇಬಿಕ್ ಶೈಲಿಯ ಭೋಜನ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಇದನ್ನು "ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಪ್ರದರ್ಶನ" ಎಂದು ಬಿಂಬಿಸಲಾಗಿತ್ತು.
ಅದೇ ರೀತಿ, 'ದಿ ಸ್ಟಾರ್ ಕ್ಲಬ್' ಆಯೋಜಿಸಿದ್ದ ಡಿಸೆಂಬರ್ 5 ರಂದು ಸಂಜೆ 6:00 ಗಂಟೆಯಿಂದ ಖಾಸಗಿ ಚಿತ್ರಮಂದಿರವೊಂದರಲ್ಲಿ ಎರಡನೆ ಕಾರ್ಯಕ್ರಮದ ಭಾಗವಾಗಿ ‘ದಾರ್-ಎ-ನಿಜಾತ್' ಪ್ರದರ್ಶನ ನಡೆಯಬೇಕಿತ್ತು.ಆದರೆ, ಈ ಪ್ರದರ್ಶನಗಳ ಕುರಿತು ವ್ಯಕ್ತವಾದ ವಿರೋಧ ಹಿನ್ನೆಲೆ ಬೆಂಗಳೂರು ನಗರ ಪೊಲೀಸರು ಆಯೋಜಕರನ್ನು ಸಂಪರ್ಕಿಸಿ ಪ್ರದರ್ಶನ ರದ್ದುಗೊಳಿಸುವಂತೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಬುಧವಾರ ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರು, ಪೊಲೀಸರು ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ. "ಏನೋ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಹೆಚ್ಚಿನ ವಿವರಗಳನ್ನು ಪಡೆಯಲು ನಾವು ಆಯೋಜಕರನ್ನು ಸಂಪರ್ಕಿಸುತ್ತಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಬಂದರೆ, ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಹೇಳಿದರು.
ಇನ್ನೂ, ಪ್ರದರ್ಶನ ಏರ್ಪಡಿಸಿದ್ದ ಆಯೋಜಕರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾವು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೇವೆ. ಇದು ಕೇವಲ ಕುಟುಂಬದವರು ಮತ್ತು ಆಪ್ತ ವಲಯಕ್ಕಾಗಿ ಉದ್ದೇಶಿಸಲಾಗಿತ್ತು. ಆದರೆ, ಇದೊಂದು ವಿವಾದದ ವಿಷಯವಾಗಿ ಪರಿಣಮಿಸಿರುವುದರಿಂದ, ಪ್ರದರ್ಶನವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.