ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯ ಅಬ್ಬರ: ಸಿಡಿಲಾಘಾತಕ್ಕೆ ಒಂದೇ ದಿನ ಐವರು ಬಲಿ
ಮಂಗಳೂರು ನಗರದ ಕೊಟ್ಟಾರದಲ್ಲಿ ಧಾರಾಕಾರ ಮಳೆಗೆ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರು: ರಾಜ್ಯಾದ್ಯಂತ ಮಂಗಳವಾರ ಗುಡುಗು ಸಿಡಿಲು ಸಹಿತ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿತ್ತು. ಕಳೆದ ಒಂದೇ ದಿನ ಕಲಬುರಗಿ, ರಾಯಚೂರು, ಧಾರವಾಡ, ವಿಜಯಪುರ, ಬಳ್ಳಾರಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ. ಹೆಚ್ಚಿನ ಕಡೆಗಳಲ್ಲಿ ಬುಧವಾರವೂ ಧಾರಕಾರ ಮಳೆ ಮುಂದುವರಿದಿದೆ.
ಕಲಬುರಗಿ ಜಿಲ್ಲೆಯ ಅಫ್ಝಲ್ ಪುರ ತಾಲೂಕಿನ ಕರಜಗಿ ಗ್ರಾಮದ ರೈತ ನಬಿಲಾಲ ಚೌಧರಿ(70) ಎಂಬವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಲಿಂಗದಹಳ್ಳಿ ಗ್ರಾಮದಲ್ಲಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲಿನ ಆಘಾತದಿಂದ ದೇವಕಿ ಮ್ಯಾಗೇರಿ(40) ಎಂಬವರು ಮೃತಪಟ್ಟಿದ್ದಾರೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೆನೇರ್ತಿ ಗ್ರಾಮದಲ್ಲಿ ಹಿರೇಹರಕುಣಿ ಗ್ರಾಮದ ಯುವಕ ಮೈಲಾರಪ್ಪ ಬಸವರಾಜ (18) ಎಂಬವರು ಸಿಡಿಲು ಬಡಿದು ಮೃತಪಟ್ಟರು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕೋಳೂರು ಗ್ರಾಮದಲ್ಲಿ ರೈತ ಬಸನಗೌಡ ಲಕ್ಷ್ಮಣ ಗೌಡ ಬಿರಾದಾರ್ (63), ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕುರಿ ಕರಿಬಸಪ್ಪ (23) ಮೃತಪಟ್ಟಿರುವುದು ವರದಿಯಾಗಿದೆ.
ವ್ಯಾಪಕ ಮಳೆ: ರಾಜ್ಯಾದ್ಯಂತ ಕಳೆದೊಂದು ದಿನದಿಂದ ಅಬ್ಬರದ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ವ್ಯಾಪಕ ಮಳೆ ವರದಿಯಾಗಿದೆ.
ಮೇ 21ರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಒಂಭತ್ತು ಜಿಲ್ಲೆಗಳಲ್ಲಿ (ಬಳ್ಳಾರಿ ದಾವಣಗೆರೆ, ಬೀದರ್, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ರಾಮನಗರ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ) ಭಾರೀ ಮಳೆಯಾಗಿದೆ. 17 ಜಿಲ್ಲೆಗಳಲ್ಲಿ (ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಪ್ಪಳ, ಬೆಳಗಾವಿ, ರಾಯಚೂರು, ಹಾಸನ, ಬಾಗಲಕೋಟೆ, ಕೊಡಗು, ವಿಜಯಪುರ, ಯಾದಗಿರಿ, ವಿಜಯನಗರ ಮತ್ತು ಬೆಂಗಳೂರು ನಗರ) ವ್ಯಾಪಕ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ ಮಳೆ 271 ಮಿ.ಮೀ. ದಾಖಲಾಗಿದೆ.