ಮೂರು ವರ್ಷಗಳಿಂದ 850 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ಯುವ ಪೀಳಿಗೆ ಒಳತಿಗಾಗಿ ರಾಜ್ಯ ಸರಕಾರ ಮಾದಕ ದ್ರವ್ಯ ವಿರುದ್ಧ ಹೋರಾಟ ಮಾಡುತ್ತಿದ್ದು, ಮೂರು ವರ್ಷಗಳಿಂದ ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ 850 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. 37 ಸಾವಿರ ಆರೋಪಿಗಳನ್ನು ಬಂಧಿಸಿ, 10 ಸಾವಿರ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗುರುವಾರ ಇಲ್ಲಿನ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ ಮಾದಕ ದ್ರವ್ಯ ವಿರುದ್ಧ ಕರ್ನಾಟಕ ಪೊಲೀಸರ ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯ ಏಕತಾ ಪರೇಡ್- ಮೋಟರ್ ಸೈಕಲ್ ರ್ಯಾಲಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕವಾಗಲಿ, ಕಾಶ್ಮೀರವಾಗಲಿ ಅಥವಾ ದೆಹಲಿಯಾಗಲಿ ಸರಕಾರಗಳು ಮತ್ತು ರಾಜ್ಯಗಳ ಭಿನ್ನತೆಗಳನ್ನು ಬದಿಗಿಟ್ಟು ಮಾದಕ ದ್ರವ್ಯಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ನಮ್ಮ ಯುವಜನರ ಭವಿಷ್ಯವನ್ನು ರಕ್ಷಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಈ ರ್ಯಾಲಿಯ ಮೂಲಕ ದೇಶದ ಯುವಜನತೆಗೆ ಇದೇ ಸಂದೇಶವನ್ನು ತಲುಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮಾದಕ ದ್ರವ್ಯ ಸೇವನೆ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಗ್ರಾಮೀಣ ಪ್ರದೇಶಕ್ಕೂ ವೇಗವಾಗಿ ಬೆಳೆಯುತ್ತಿದೆ. ಇದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗದೆ, ದೇಶಾದ್ಯಂತ ಬಹಳ ವೇಗವಾಗಿ ನಡೆಯುತ್ತಿದೆ. ಹೀಗಾಗಿ ಮಾದಕಗಳ ಉತ್ಪಾದನೆ, ಪೂರೈಕೆ ಹಾಗೂ ಮಾರಾಟ ಜಾಲವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿಯೇ ತಡೆ ಹಿಡಿಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ. ಮಾದಕ ದ್ರವ್ಯ ಸೇವನೆಯಿಂದ ದೂರು ಇರುವಂತೆ ಯುವ ಸಮುದಾಯಕ್ಕೆ ಸ್ಪಷ್ಟ ಸಂದೇಶವನ್ನು ನೀಡಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಪೊಲೀಸ್ ಮಹಾನಿರ್ದೇಶಕ ಡಾ. ಎಂ. ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.