Bengaluru | ʼಸ್ಟಿಂಗ್ ಆಪರೇಷನ್ʼ ತನಿಖೆಗೆ ಆಗ್ರಹ; ಕಮಿಷನರ್ ಕಚೇರಿ ಮೆಟ್ಟಿಲು ಮೇಲೆ ಕುಳಿತು HDK ಧರಣಿ
ಬೆಂಗಳೂರು : ʼಸ್ಟಿಂಗ್ ಆಪರೇಷನ್ʼ ಪ್ರಕರಣ ಸಂಬಂಧ ತನಿಖೆಗೆ ಆಗ್ರಹಿಸಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಧರಣಿ ನಡೆಸಿದ್ದಾರೆ.
ʼಮಾಜಿ ಸಿಎಂ ವಿರುದ್ಧ ಅಪಪ್ರಚಾರ ಮಾಡಿದ ವ್ಯಕ್ತಿಯನ್ನು ಕಾಪಾಡಿದ್ದು ಏಕೆ? ಸಿದ್ದರಾಮಯ್ಯಗೆ ಬೆಂಬಲ ನೀಡಿದ್ದೇವೆ, ಆದರೆ ಅವರೇ ಮೌನವಾಗಿದ್ದಾರೆ. ನಮಗೆ ಭಯ ಹುಟ್ಟಿಸುತ್ತೇವೆ ಎಂದರೆ ನಾವು ಭಯ ಪಡುವುದಿಲ್ಲʼ ಎಂದು ಎಚ್ಡಿಕೆ ಹೇಳಿದರು.
ʼನಮ್ಮ ಕಾರ್ಯಕರ್ತರು ಹಾಗೂ ನನ್ನನ್ನೂ ವಿಚಾರಣೆಗೆ ಒಳಪಡಿಸುತ್ತಾರೆ ಎಂದರೂ ನಾವು ಸಿದ್ಧ. ಆದರೆ ಮೂಲ ವ್ಯಕ್ತಿಯನ್ನು ಬಂಧಿಸಿ. ನಮ್ಮ ಯಾವ ಕಾರ್ಯಕರ್ತ ಮೇಲೆ ಅನುಮಾನ ಇದೆ ಹೇಳಿ ಕಳುಹಿಸುತ್ತೇವೆ. ಇಲ್ಲ ನಾನೇ ಬೇಕು ಅಂದರೂ ಬರುತ್ತೇನೆʼ ಎಂದು ಆಕ್ರೋಶ ಹೊರಹಾಕಿದರು.
ಕಮಿಷನರ್ ಭರವಸೆ :
ʼಪ್ರಕರಣ ಸಂಬಂಧ ನಾವು ಎಲ್ಲ ರೀತಿಯ ತನಿಖೆ ಮಾಡುತ್ತೇವೆʼ ಎಂದು ಪೊಲೀಸ್ ಕಮಿಷನರ್ ಭರವಸೆ ನೀಡಿದ್ದು, ಈ ಕಾರಣಕ್ಕೆ ಅಂತಿಮವಾಗಿ ಕುಮಾರಸ್ವಾಮಿ ಪ್ರತಿಭಟನೆ ಕೈಬಿಟ್ಟರು.
ಬನ್ನಿ ನನ್ನನ್ನು ಟಚ್ ಮಾಡಿ ನೋಡೋಣ :
ಬೆಂಗಳೂರು: ಸ್ಟಿಂಗ್ ಆಪರೇಷನ್ ಬಗ್ಗೆ ನಾನು ವಿಚಾರಣೆಗೆ ಬರಲು ಸಿದ್ಧನಿದ್ದೇನೆ. ಬನ್ನಿ ನನ್ನನ್ನು ಟಚ್ ಮಾಡಿ ನೋಡೋಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆಪಿ ಭವನದಲ್ಲಿ ಗುರುವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಿಜಯದಶಮಿಯ ಸಮಯ ಯುದ್ಧಕ್ಕೆ ಹೋಗುವ ಸಮಯವಾಗಿದೆ. ಈ ರಾಜ್ಯ ನಡೆಯುತ್ತಿರುವುದು ಸಿಎಂನಿಂದಲೂ ಅಲ್ಲ. ನನ್ನಿಂದನೂ ಅಲ್ಲ. ಯಾವ ಮುಖಂಡರು, ಅಧಿಕಾರಿಗಳಿಂದಲೂ ಅಲ್ಲ. ತೀರ್ಮಾನಿಸುವವನು ಮೇಲಿದ್ದಾನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಗೃಹ ಸಚಿವರು ಅತ್ಯಂತ ಕಠಿಣವಾದ ಪದ ಬಳಕೆ ಮಾಡಿದ್ದಾರೆ. ಕೆಪಿಎಸ್ಸಿ ಕರ್ಮಕಾಂಡ. ಅದರಲ್ಲಿ ಇಡಿಯವರು ಬರದೇ ಇದ್ದಿದ್ದರೆ ಎಲ್ಲವನ್ನೂ ಮುಚ್ಚಿಹಾಕುವವರು. ಅವರು ಬಂದಿದ್ದರಿಂದ ಎಲ್ಲವೂ ಬಯಲಾಗಿದೆ. ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿದ್ದಾಗ 24 ಮಂದಿ ಎಇಇ ನೇಮಕಾತಿ ಅಕ್ರಮವಾಗಿದ್ದರ ಕುರಿತು ದಾಖಲೆಗಳನ್ನು ಇಟ್ಟಿದ್ದೆ. ಅದರ ಬಗ್ಗೆ ಪ್ರಿಯಾಂಕಾ ಖರ್ಗೆಗೆ ಉತ್ತರ ಕೊಡಲು ಆಗಿಲ್ಲ. ಸುಪ್ರೀಂ ಕೋರ್ಟ್ಗೆ ಹೋಗಿ ಇಲ್ಲಿನ ಎಜಿ ಹಿಡಿದುಕೊಂಡು ಐಪಿಎಸ್ ಅಧಿಕಾರಿ ಮೇಲೆ ತನಿಖೆ ನಡೆಸುತ್ತಿರುವ ಬಗ್ಗೆ ತಿರುಚಿ ಮಾಹಿತಿ ನೀಡಿದ್ದಾರೆ. ಈಗ ಆ ಅಧಿಕಾರಿ ಸಿಎಸ್ಗೆ ಪತ್ರ ಬರೆದು ನನ್ನ ಮೇಲೆ ಯಾವುದೇ ಆರೋಪ ಇಲ್ಲ ಅಂದಿದ್ದಾರೆ ಎಂದು ಎಚ್ಡಿಕೆ ತಿಳಿಸಿದ್ದಾರೆ.