ಸಾಂದರ್ಭಿಕ ಚಿತ್ರ | PC : PTI

ಬೆಂಗಳೂರು : ನಕಲಿ ದಾಖಲೆಗಳನ್ನು ಬಳಸಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ಜಾರಿ ನಿರ್ದೇಶನಾಲಯವು (ಈ.ಡಿ) ವಿಶೇಷ ನ್ಯಾಯಾಲಯಕ್ಕೆ ‘ಪೂರಕ ಅಭಿಯೋಜನಾ ದೂರ’ನ್ನು(ಪ್ರಾಸಿಕ್ಯೂಷನ್ ಕಂಪ್ಲೈಂಟ್) ಸಲ್ಲಿಸಿದೆ.

ಈ ಸಂಬಂಧ ಜಾರಿ ನಿರ್ದೇಶನಾಲಯವು ಪ್ರಕಟಣೆ ಹೊರಡಿಸಿದ್ದು, ಈಗಾಗಲೇ ಪ್ರಕರಣದಲ್ಲಿ ಭಾಗಿಯಾದ 15 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆರೋಪಿಗಳಿಗೆ ಸೇರಿದ ಸುಮಾರು 6.26 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈಗ ಹೆಚ್ಚುವರಿ ಸಾಕ್ಷ್ಯಗಳು, ದಾಖಲೆಗಳು ಅಥವಾ ಹೊಸ ಆರೋಪಿಗಳ ಹೆಸರನ್ನು ಸೇರಿಸಿ ನ್ಯಾಯಾಲಯಕ್ಕೆ ಮತ್ತೊಂದು ಹೆಚ್ಚುವರಿ ದೂರನ್ನು ಸಲ್ಲಿಸಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದಿದೆ. ಎಚ್‌ಎಎಲ್ ಎರಡನೇ ಹಂತದಲ್ಲಿರುವ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಲಿಮಿಟೆಡ್ ಹೆಸರಿನಲ್ಲಿ ನಕಲಿ ಕರೆಂಟ್ ಖಾತೆಯನ್ನು ವಂಚನೆಯಿಂದ ತೆರೆಯಲಾಗಿದೆ.

ನಂತರ, ನಿಗಮಕ್ಕೆ ಸೇರಿದ ತಲಾ 5 ಕೋಟಿ ರೂ. ಮೌಲ್ಯದ ನಾಲ್ಕು ಠೇವಣಿಗಳನ್ನು ಮುಚ್ಚುವಿಕೆ ಪತ್ರಗಳನ್ನು ಬಳಸಿ ಅಕಾಲಿಕವಾಗಿ ಮುಚ್ಚಲಾಗಿದೆ. ಪರಿಣಾಮ 14.95 ಕೋಟಿ ರೂ. ವಂಚಿಸಿ, ಈ ಹಣವನ್ನು ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಹೆಸರಿನ ಬ್ಯಾಂಕ್ ಖಾತೆ ಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಈ.ಡಿ. ಬಹಿರಂಗಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor