ಬೆಂಗಳೂರು : ಈ ವರ್ಷದ ಬೆಂಗಳೂರು ಟೆಕ್ ಸಮಿಟ್(ಬಿಟಿಎಸ್-2026) ರೋಬೊಟಿಕ್ಸ್‌ ನಿಂದ ಹಿಡಿದು ಜಾಗತಿಕ ತಂತ್ರಜ್ಞಾನ ಸಹಭಾಗಿತ್ವದವರೆಗೆ ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿ ಉಳಿಯುವಂತೆ ಮಾಡುತ್ತದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಬಿಟಿಎಸ್-2026ರ ಕುರಿತಾಗಿ ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಮಿಟ್ ಸದಾ ವಿಚಾರಗಳು, ನಾವೀನ್ಯತೆ ಮತ್ತು ಸಹಯೋಗಕ್ಕೆ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಈ ಬಾರಿ ನ.17ರಿಂದ ನ.19ರವರೆಗೆ ಬೆಂಗಳೂರಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಎಐ ಅಂಡ್ ಬಿಯಾಂಡ್ ಆಶಯದಡಿ ಸಮಿಟ್ ಅನ್ನು ನಡೆಸಲಾಗುತ್ತಿದೆ ಎಂದರು.

ಉದಯೋನ್ಮುಖ ತಂತ್ರಜ್ಞಾನಗಳ ಸಾಧ್ಯತೆಗಳನ್ನು ಜನರು ನೇರವಾಗಿ ಅನುಭವಿಸುವುದರ ಜೊತೆಗೆ, ಸ್ಟಾರ್ಟ್‍ಅಪ್‍ಗಳು, ಸಂಶೋಧಕರು, ಹೂಡಿಕೆದಾರರು ಮತ್ತು ಉದ್ಯಮದ ನಾಯಕರ ನಡುವೆ ಸಂಪರ್ಕ ಹಾಗೂ ಸಹಯೋಗಕ್ಕೆ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಮಿಟ್‍ನಲ್ಲಿ 1,800ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುವ ನಿರೀಕ್ಷೆ ಇದೆ. ಕೃತಕ ಬುದ್ಧಿಮತ್ತೆ, ಡೀಪ್‍ಟೆಕ್, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್‍ಗಳು, ರೊಬೊಟಿಕ್ಸ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರದರ್ಶನ ನಡೆಯಲಿದೆ. ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳು, ಸ್ಟಾರ್ಟ್‍ಅಪ್‍ಗಳ ಪ್ರದರ್ಶನ, ಹೂಡಿಕೆದಾರರೊಂದಿಗಿನ ಸಂವಾದ, ಜಾಗತಿಕ ಸಹಭಾಗಿತ್ವ ಮತ್ತು ಸಂವಾದಾತ್ಮಕ ಕಲಿಕಾ ಅನುಭವಗಳು ಈ ಸಮಿಟ್‍ನ ಪ್ರಮುಖ ಆಕರ್ಷಣೆಗಳಾಗಿವೆ ಎಂದು ಅವರು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor