ಜಾತಿ-ಧರ್ಮ ವೈಷಮ್ಯ ನಿವಾರಣೆಗೆ ಗಾಂಧಿ ಮಾರ್ಗ ಪ್ರಸ್ತುತ : ಪ್ರೊ.ಬರಗೂರು
ಬೆಂಗಳೂರು : ಜಾತಿಯ ಜೈಲುಗಳು ಮತ್ತು ಧರ್ಮ ದ್ವೇಷದ ದ್ವೀಪಗಳಲ್ಲಿ ಬಂಧಿಗಳಾಗಿರುವ ದೇಶವಾಸಿಗಳನ್ನು ಬಿಡುಗಡೆಗೊಳಿಸಿ ಬಹುತ್ವ ಭಾರತದ ನೆಲೆಯನ್ನು ಸದೃಢಗೊಳಿಸಲು ಗಾಂಧೀಜಿಯವರ ತತ್ವ ಚಿಂತನೆ ಇಂದು ಅತ್ಯಂತ ಪ್ರಸ್ತುತವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧಿಯವರ 157ನೇ ಜಯಂತಿಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲೀಗ ವ್ಯಕ್ತಿತ್ವ ಭಂಜನೆಯ ಹುನ್ನಾರ ಮುನ್ನಲೆಗೆ ಬಂದಿದ್ದು ಮಹಾತ್ಮ ಗಾಂಧಿಯವರೂ ಅಂತಹ ನಕಾರಾತ್ಮಕ ಕೃತ್ರಿಮ ದಾಳಿಗೆ ಒಳಗಾಗುತ್ತಿರುವುದು ಅಪಾರ ವಿಷಾದದ ಸಂಗತಿಯಾಗಿದೆ ಎಂದು ಪ್ರೊ.ಬರಗೂರು ವಿಮರ್ಶಿಸಿದರು.
ನುಡಿ ನೈತಿಕತೆ ಹಾಗೂ ರಾಜಕೀಯ ಮತ್ತು ಸಾಮಾಜಿಕ ನೈತಿಕತೆ ನಶಿಸುತ್ತಿರುವ ಇಂದಿನ ಸಂಕೀರ್ಣ ಸನ್ನಿವೇಶದಲ್ಲಿ ಸ್ವಾತಂತ್ರ್ಯ ಮತ್ತು ಸಂವಿಧಾನ ಮೌಲ್ಯಗಳನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದು ಪ್ರೊ.ಬರಗೂರು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಸಹಜವೆಂದ ಅವರು ಸರ್ಕಾರವನ್ನು ಟೀಕಿಸುವವರಿಗೆ ದೇಶ ದ್ರೋಹಿಗಳ ಹಣೆಪಟ್ಟಿ ಹಚ್ಚುವ ಪ್ರವೃತ್ತಿಯನ್ನು ಬಲವಾಗಿ ಖಂಡಿಸಿದರು. ಸಂವಾದದ ಮುಕ್ತ ವಾತಾವರಣ ಮಾಯವಾಗಿದೆ ಎಂದು ಪ್ರೊ.ಬರಗೂರು ವಿಷಾದಿಸಿದರು.
ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಮತ್ತು ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹ ವಸಾಹತುಶಾಹಿ ಹಾಗೂ ವರ್ಣಾಹತುಶಾಹಿಯ ವಿರುದ್ಧದ ಮಾರ್ಮಿಕ ಸಂಕೇತಗಳು ಎಂದು ಬರಗೂರು ಬಣ್ಣಿಸಿದರು.
ವಿವಿ ಕುಲಪತಿ ಪ್ರೊ.ರಮೇಶ್ ಬಿ. ಮಾತನಾಡಿ, ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಮುಂದಾಗುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.
ವಿಶ್ವವಿದ್ಯಾನಿಲಯದ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಶೀಘ್ರದಲ್ಲೇ ಗಾಂಧೀಜಿಯವರ ತತ್ವಗಳ ಅಧ್ಯಯನದ ಡಿಪ್ಲೊ ಮೊ ಕೋರ್ಸ್ ಆರಂಭಿಸುವ ಇಂಗಿತವನ್ನು ಪ್ರೊ.ರಮೇಶ್ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಹುತಾತ್ಮ ವಿದ್ಯಾರ್ಥಿಗಳ ಸ್ಮಾರಕಕ್ಕೆ ಗಣ್ಯರು ಪುಷ್ಪ ನಮನದ ಮೂಲಕ ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಜ್ಯೋತಿ ವೆಂಕಟೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕುಲಸಚಿವ(ಮೌಲ್ಯಮಾಪನ) ಪ್ರೊ.ರಮೇಶ ಬಿ.ಕುಡೇನಟ್ಟಿ, ವಿತ್ತಾಧಿಕಾರಿ ಎಂ.ವಿ.ವಿಜಯಲಕ್ಷ್ಮೀ ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಡಾ.ಪ್ರಿಯಾಂಕಾ ಮತ್ತು ಡಾ.ಮಾಲಿನಿ ಕಾರ್ಯಕ್ರಮ ನಿರ್ವಹಿಸಿದರು.