ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ನಕಲಿ ಮತದಾರರ ರಕ್ಷಣೆಗೆ ಕುತಂತ್ರ : ಬಸವರಾಜ ಬೊಮ್ಮಾಯಿ
ಬೆಂಗಳೂರು : ಚುನಾವಣೆ ಆಯೋಗದ ಕಚೇರಿ ಮುಂದೆ ಸಿಎಂ ಮತ್ತವರ ಸಂಪುಟದ ಸದಸ್ಯರು ಧರಣಿ ನಡೆಸಿದ್ದು, ಅತ್ಯಂತ ನಾಟಕೀಯವಾದದ್ದು. ನಕಲಿ ಮತದಾರರ ರಕ್ಷಣೆ ಮಾಡುವ ಕುತಂತ್ರದ ಭಾಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಶುಕ್ರವಾರ ಪ್ರಕಟಣೆ ನೀಡಿರುವ ಅವರು, ಎಸ್‍ಐಆರ್ ಬಗ್ಗೆ ಸಿಎಂಗೆ ಆಕ್ಷೇಪಣೆ ಇದ್ದರೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಇರುವಂತಹ ಅವರ ಬಿಎಲ್‍ಒಗಳ ಮುಖಾಂತರ ಆಕ್ಷೇಪಣೆ ಹಾಕಬಹುದು. ನಮೂನೆ-7 ಕೊಟ್ಟಿರುವುದೇ ತಪ್ಪು ಎನ್ನುವುದು ಸರಿಯಲ್ಲ. ಅಕ್ರಮ ಮತದಾರರನ್ನು ತೆಗೆಯಲು ಒಬ್ಬರಿಗೆ 31 ಮತದಾರರ ಬಗ್ಗೆ ಆಕ್ಷೇಪಣೆ ಮಾಡುವುದಕ್ಕೆ ಆಯೋಗ ಅಧಿಕಾರ ಕೊಟ್ಟಿದೆ. ಈಗ ಕೊಟ್ಟಿರುವ ಅಧಿಕಾರ ಬಳಕೆ ಮಾಡುವುದೇ ತಪ್ಪು ಎನ್ನುವ ರೀತಿಯಲ್ಲಿ ಸಿಎಂ ವಾದಿಸುವುದು ಸಲ್ಲ ಎಂದು ಆಕ್ಷೇಪಿಸಿದ್ದಾರೆ.
ಚುನಾವಣೆ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ. ಆಯೋಗ ಮತ್ತು ಇತರ ಕಾನೂನು ಅಡಿಯಲ್ಲಿ ತಾವು ನಿರ್ಭೀತಿಯಿಂದ, ನಿರ್ಭಯವಾಗಿ ಕೆಲಸವನ್ನ ಮಾಡಬೇಕು. ಯಾರು ತಪ್ಪು ಮಾಡುತ್ತಿದ್ದಾರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಯಾರು ಆಯೋಗದ ಕಾನೂನು ಅಡಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ, ಅವರಿಗೆ ರಕ್ಷಣೆ ಕೊಡುವಂತದ್ದು ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.