ಬೇಡ್ತಿ, ಅಘನಾಶಿನಿ ನದಿ ಯೋಜನೆ ಕೈಬಿಡಲು ಆಗ್ರಹಿಸಿ ಧರಣಿ ಸತ್ಯಗ್ರಾಹ
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ, ‘ಪಶ್ಚಿಮಘಟ್ಟ ಉಳಿಸಿ ಉತ್ತರ ಕನ್ನಡ ರಕ್ಷಿಸಿ’ ಶೀರ್ಷಿಕೆಯಡಿ ‘ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ’ ನೇತೃತ್ವದಲ್ಲಿ ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ಬೇಡ್ತಿ-ಅಘನಾಶಿನಿ ಯೋಜನೆಗೆ ಸಂಬಂಧಿಸಿದಂತೆ ಡಿಪಿಎಆರ್ ಅನ್ನು ಕೂಡಲೇ ರದ್ದುಪಡಿಸಿ, ಉತ್ತರ ಕನ್ನಡದ ನದಿಗಳು ಹಾಗೂ ಜನರ ಜೀವ ಸಂರಕ್ಷಿಸಬೇಕು. ದಕ್ಷಿಣ ಭಾರತದ ಆಹಾರ ಸುರಕ್ಷತೆಯ ತಾಣ ಸಹ್ಯಾದ್ರಿ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ 22 ಪ್ರಮುಖ ನದಿ ಕಣಿವೆಗಳ ಸಂರಕ್ಷಣೆಗೆ ಸರಕಾರ ವಿಶೇಷ ಸುಸ್ಥಿರ ಯೋಜನೆ ರೂಪಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಪಶ್ಚಿಮ ಘಟ್ಟದ ಹೃದಯ ಭಾಗವಾದ ಬೇಡ್ತಿ ಮತ್ತು ಅಘನಾಶಿನಿ ನದಿ ಕಣಿವೆಗಳಲ್ಲಿ 4 ಸ್ಥಳಗಳಲ್ಲಿ ಆಣೆಕಟ್ಟು ಕಟ್ಟಿ ನೀರನ್ನು ಬೇರೆಡೆ ಸಾಗಿಸುವ ವಿನಾಶಕಾರಿ ಯೊಜನೆಗಳು ಕಣಿವೆಗಳ ರೈತರು, ಮೀನುಗಾರರು ಸೇರಿ ಲಕ್ಷಾಂತರ ಜನರ ಬದುಕು ನಾಶವಾಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನ ಹೊಳೆಯ ವಿಫಲ ನದಿ ತಿರುವು ಯೋಜನೆಯಂತೆ ಬೇಡ್ತಿ ಅಘನಾಶಿನಿ ನದಿಗಳ ದಿಕ್ಕು ತಿರುಗಿಸುವ ಯೋಜನೆಗಳು ವ್ಯರ್ಥ, ನೀರಿಲ್ಲದ ನೀರಾವರಿ ಯೋಜನೆಗಳಾಗಲಿವೆ. ಬೇಡ್ತಿ ನದಿಯಲ್ಲಿ ಹೆಚ್ಚುವರಿ ನೀರಿಲ್ಲ. ನದಿಗಳನ್ನು ತಿರುಗಿಸುವ ಹುಚ್ಚು ಸಾಹಸ ನಡೆಸಿದರೆ ಬೇಡ್ತಿ ಅಘನಾಶಿನಿ ಜೀವ ನದಿಗಳು ಸಾಯುತ್ತವೆ ಎಂದು ಎಚ್ಚರಿಕೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸುಸ್ಥಿರ ನೀರಾವರಿ ಯೋಜನೆಯನ್ನು ವಿನಾಶ ರಹಿತವಾಗಿ ರೂಪಿಸಬೇಕು. ವಿಜ್ಞಾನಿಗಳು, ಸ್ಥಳೀಯ 120 ಗ್ರಾಮ ಪಂಚಾಯತ್‍ಗಳು, 160 ಗ್ರಾಮೀಣ ಸಹಕಾರ ಸಂಘಗಳು, ಉತ್ತರ ಕನ್ನಡ ಜಿಲ್ಲಾ ಕೆಡಿಪಿ ಸಭೆಯಲ್ಲಿ ಎಲ್ಲಾ ಧಾರ್ಮಿಕ ಮುಖಂಡರು, ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಕೇಂದ್ರ, ರಾಜ್ಯ ಸರಕಾರಗಳು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ ಎಂದರು.
ಧರಣಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಶಾಸಕ ಭೀಮಣ್ಣ ನಾಯ್ಕ್, ಪರಿಸರ ಹೋರಾಟಗಾರ ಡಾ.ಯಲ್ಲಪ್ಪ ರೆಡ್ಡಿ, ವಿಜ್ಞಾನಿ ಟಿ.ವಿ.ರಾಮಚಂದ್ರ, ಪರಿಸರ ತಜ್ಞ ಎ.ಎನ್ ನಾಯಕ್, ಸಾಹಿತಿ ಜಯಂತ್ ಕಾಯ್ಕಿಣಿ, ನೀರಾವರಿ ತಜ್ಞರಾದ ವಿ.ಆರ್. ಹೆಗಡೆ ಮತ್ತಿತರರು ಹಾಜರಿದ್ದರು.