ಬೆಂಗಳೂರು : ಕರ್ನಾಟಕದಲ್ಲಿ ಆದಷ್ಟು ಬೇಗ ಯುವಜನ ಆಯೋಗ ಹಾಗೂ ಯುವಜನರ ಮಾನಸಿಕ ಆರೋಗ್ಯಕ್ಕಾಗಿ ನೀತಿ ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಸಂವಾದದ ವತಿಯಿಂದ ಆಯೋಜಿಸಿದ್ದ ‘ಯುವಾಧಿವೇಶನ-2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರು ಬಲಿಷ್ಠರಾದಾಗ ಮಾತ್ರ ಈ ದೇಶ ಬಲಿಷ್ಠವಾಗಲು ಸಾಧ್ಯ. ನಮ್ಮ ವ್ಯಕ್ತಿತ್ವ ಮತ್ತು ಕನಸುಗಳು ಗಟ್ಟಿಯಾಗುವುದು ನಾವು ಸಕ್ರಿಯವಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡಾಗ ಮಾತ್ರ ಎಂದು ಅಭಿಪ್ರಾಯಪಟ್ಟರು.

ಈ ದೇಶದ ಭವಿಷ್ಯ ಯುವಜನರು. ಅವರ ಮಾನಸಿಕ ಆರೋಗ್ಯದ ಕುರಿತು ನಾವೆಲ್ಲಾ ಆಲೋಚಿಸಬೇಕಿದೆ. ಉತ್ತಮವಾದ ಪ್ರಜೆಯಾಗುವುದಕ್ಕೆ ಯಾವುದೇ ಕೋರ್ಸ್‍ಗಳು ಇಲ್ಲ. ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಂವಾದದಂತ ಸಂಸ್ಥೆಗಳಿಂದ ಮಾತ್ರ ಸಾಧ್ಯ ಎಂದರು.

ಇದೇ ವೇಳೆ ಕರ್ನಾಟಕದಲ್ಲಿ ಯುವಜನ ಆಯೋಗ ಜಾರಿಯಾಗಬೇಕು ಮತ್ತು ಯುವಜನರ ಮಾನಸಿಕ ಆರೋಗ್ಯಕ್ಕಾಗಿ ನೀತಿ ಜಾರಿಯಾಗಬೇಕೆಂದು ಯುವಜನರು ಸಚಿವರಿಗೆ ಹಕ್ಕೊತ್ತಾಯ ಪತ್ರ ನೀಡಿದರು. ಸಂವಾದ ಸಂಸ್ಥೆಯ ಯೋಗೇಶ್ ಮಲ್ಲಿಗೆಮಾಡು ಅವರು ಹಕ್ಕೊತ್ತಾಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಜನಾರ್ದನ ಕೆಸರಗದ್ದೆ, ಸವಿತಾ ಸುರೇಶ್ ಬಾಬು, ಮುರಳಿ ಮೋಹನ್ ಕಾಟಿ, ಮಂಜುಳ ಸುನೀಲ್, ಇಳಂಗೋ ಸ್ಟಾನಿಸ್ಲಾಸ್, ದೇವರಾಜ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor