ರಾಜ್ಯದಲ್ಲಿ ನವೆಂಬರ್-ಡಿಸೆಂಬರ್‌ನಲ್ಲಿ ದೊಡ್ಡ ಕ್ರಾಂತಿ ಆಗೋದು ನಿಶ್ಚಿತ : ಆರ್.ಅಶೋಕ್
ಹುಬ್ಬಳ್ಳಿ, ಅ.23: ರಾಜ್ಯದಲ್ಲಿ ನವೆಂಬರ್, ಡಿಸೆಂಬರ್ ನಲ್ಲಿ ದೊಡ್ಡ ಕ್ರಾಂತಿ ಆಗೋದು ನಿಶ್ಚಿತ. ಮುಖ್ಯಮಂತ್ರಿ ಬದಲಾವಣೆ ಆಗಬಹುದು ಅಥವಾ ಸರಕಾರವೇ ಬದಲಾಗಬಹುದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಆಗುವ ಕನಸಿನಲ್ಲಿ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಬಲಿ ಕೊಡುವ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹೇಗೆ ಹೆಡೆಮುರಿ ಕಟ್ಟುತ್ತದೆ ಎಂದು ಮುಂದೆ ಗೊತ್ತಾಗುತ್ತದೆ. ಯತೀಂದ್ರ ಹೇಳಿಕೆ ಕೇವಲ ಆರಂಭ ಅಷ್ಟೇ, ಸಿನಿಮಾ ಇನ್ನೂ ಬಾಕಿಯಿದೆ. ಸಿದ್ದರಾಮಯ್ಯ ಹೂಡಿರುವ ಷಡ್ಯಂತ್ರಗಳು ಒಂದೊಂದೆ ಹೊರಗೆ ಬರುತ್ತವೆ ಎಂದು ಅಶೋಕ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಕೊರತೆ ಉಂಟಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು, ಜೆಡಿಎಸ್‍ನವರು ಹಾಲು ಜೇನುನಂತೆ ಇದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾವುದೇ ಅತೃಪ್ತಿ ಇಲ್ಲ ತೃಪ್ತಿಯಿದೆ, ಸಂತೃಪ್ತಿಯಿದೆ. ಮುಂದೆ ನಮ್ಮ ಎನ್‍ಡಿಎ ಮೈತ್ರಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಅಶೋಕ್ ಹೇಳಿದರು.