ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವ ಇಚ್ಛಾಶಕ್ತಿ ತೋರಿಸಿ: ಆರ್.ಅಶೋಕ್
ಬೆಂಗಳೂರು : ‘ಬ್ರ್ಯಾಂಡ್ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಜಾಹೀರಾತು ಕೊಡುವುದಕ್ಕಿಂತ ಮೊದಲು ಜನರಿಗೆ ಸಿಗಬೇಕಾದ ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೆ ತರುವ ಇಚ್ಛಾಶಕ್ತಿ ತೋರಿಸಿ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಲಹೆ ನೀಡಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಶಕ್ತಿ’ ಯೋಜನೆಯ ಹೆಸರಲ್ಲಿ ಸಾರ್ವಜನಿಕ ಸಾರಿಗೆಯನ್ನು ಹಳ್ಳ ಹಿಡಿಸಿರುವ ಕಾಂಗ್ರೆಸ್ ಸರಕಾರ, ಇದೀಗ ಕೇಂದ್ರ ಸರಕಾರ ಬೆಂಗಳೂರಿಗೆ ಮಂಜೂರು ಮಾಡಿರುವ 4,500 ಎಲೆಕ್ಟ್ರಿಕ್ ಬಸ್‍ಗಳನ್ನೂ ಕೈ ಬಿಡುವ ಹಂತಕ್ಕೆ ತಂದಿದೆ’ ಎಂದು ಗಮನ ಸೆಳೆದಿದ್ದಾರೆ.
‘ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ 2025ರಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ 1,505 ಕೋಟಿ ರೂ.ಸಹಾಯಧನದೊಂದಿಗೆ 4,500 ಎಲೆಕ್ಟ್ರಿಕ್ ಬಸ್‍ಗಳನ್ನು ಬೆಂಗಳೂರಿಗೆ ಮಂಜೂರು ಮಾಡಿದೆ. ಆದರೆ ರಾಜ್ಯ ಸರಕಾರದಿಂದ ಸಂಪುಟದ ಅನುಮೋದನೆ ಹಾಗೂ ಕಾರ್ಯಾದೇಶ ವಿಳಂಬವಾಗಿರುವ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ‘ಲೇಟ್’ (ಸತ್ತ) ಸರಕಾರದ ವಿಳಂಬದಿಂದ ಬೆಂಗಳೂರಿಗೆ ಮಂಜೂರಾದ ಬಸ್‍ಗಳು ಬೇರೆ ರಾಜ್ಯಗಳ ಪಾಲಾಗುವ ಆತಂಕ ಎದುರಾಗಿದೆ. ಮುಖ್ಯಮಂತ್ರಿಗಳೇ, ಇನ್ನೆಷ್ಟು ದಿನ ಕಡತಗಳನ್ನು ಬಾಕಿ ಇಡುತ್ತೀರಿ?. ಸಾರ್ವಜನಿಕ ಸಾರಿಗೆಯ ಸಂಕಷ್ಟದಲ್ಲಿರುವ ಬೆಂಗಳೂರಿನ ಜನರಿಗೆ ಕೇಂದ್ರ ನೀಡಿರುವ 4,500 ಎಲೆಕ್ಟ್ರಿಕ್ ಬಸ್‍ಗಳನ್ನು ತಕ್ಷಣ ತರಲು ಕ್ರಮ ಕೈಗೊಳ್ಳಿ.
ನಿಮ್ಮ ಸರಕಾರದ ವಿಳಂಬದಿಂದ ಕರ್ನಾಟಕದ ಪಾಲು ಬೇರೆ ರಾಜ್ಯಗಳಿಗೆ ಹೋಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ರಾಜ್ಯದ ಅಭಿವೃದ್ಧಿಯನ್ನು ಬಲಿಕೊಡಬೇಡಿ. ಜನರ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ, ತಕ್ಷಣ ಕಾರ್ಯಾದೇಶ ನೀಡಿ ಕೇಂದ್ರದ ಯೋಜನೆಯನ್ನು ಜಾರಿಗೊಳಿಸಿ’ ಎಂದು ಮನವಿ ಮಾಡಿದ್ದಾರೆ.