×
Ad

‘ಜೀ ಹುಜೂರು’ ಸಂಸ್ಕೃತಿಯನ್ನು ನನ್ನಿಂದ ನಿರೀಕ್ಷೆ ಮಾಡುವುದು ಮೂರ್ಖತನ : ಬಿ.ಕೆ.ಹರಿಪ್ರಸಾದ್

Update: 2026-07-12 18:35 IST

ಬೆಂಗಳೂರು : ‘ಶಿಷ್ಟಾಚಾರಗಳ ಪಿತಾಮಹ’ ಪ್ರಹ್ಲಾದ್ ಜೋಶಿ ಅವರು, ಮೊದಲು ತಮ್ಮ ಪಕ್ಷದ ನಾಯಕರಿಗೆ ಹಾಗೂ ಅದರ ಬಾಲಗೊಂಚಿ ಭಕ್ತರಿಗೆ ಸಾರ್ವಜನಿಕ ಭಾಷೆಯ ಬಗ್ಗೆ ಪಾಠ ಮಾಡಲಿ. ಪೋಕ್ಸೋ ಆರೋಪಿಗಳನ್ನು, ಚೆಕ್ ಮೂಲಕ ಲಂಚ ಪಡೆದು, ತಮ್ಮದೇ ಪಕ್ಷದ ನಾಯಕರಿಂದ ‘ಎಳಸು’ ಅಧ್ಯಕ್ಷ ಎಂದು ಬಿರುದಾಂಕಿತರ ಸಾರ್ವಜನಿಕ ಭಾಷೆಯನ್ನು ಅವರದ್ದೇ ಭಾಷೆಯಲ್ಲಿ ಉತ್ತರಿಸುತ್ತೇನೆ ಹೊರತು, ‘ಜೀ ಹುಜೂರು’ ಎನ್ನುವ ಬಿಜೆಪಿಯ ಸಂಸ್ಕೃತಿಯನ್ನು ನನ್ನಿಂದ ನಿರೀಕ್ಷೆ ಮಾಡುವುದು ಮೂರ್ಖತನ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ರವಿವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಶಿಷ್ಟಾಚಾರದ ಬಗ್ಗೆ ಪುಂಖಾನುಪುಂಖ ಮಾತ್ನಾಡುವ ಜೋಶಿ, ತನ್ನದೇ ಒಡಹುಟ್ಟಿದ ಸಹೋದರ ‘ಗೋಪಾಲ’ ಮಾಡಿದ ಗೋಲ್ಮಾಲ್ ಬಗ್ಗೆ ಮಾತ್ನಾಡುವ ‘ಕನಿಷ್ಟ ಶಿಷ್ಟಾಚಾರ’ವೂ ಇಲ್ವಾ?. ಲೋಕಸಭೆಯ ಟಿಕೆಟ್ ಕೊಡಿಸುವುದಾಗ ಅಮಾಯಕ ದಲಿತ ಹೆಣ್ಣು ಮಗಳನ್ನು ಎರಡು ಕೋಟಿ ರೂ.ಅನ್ಯಾಯ ಮಾಡಿದ್ದು ‘ಶಿಷ್ಟಾಚಾರ’ದ ವ್ಯಾಪ್ತಿಯೊಳಗೆ ಬರೋದಿಲ್ವಾ?. ಅಣ್ಣನ ಚುನಾವಣೆಗೆ ಮತ ಕೇಳುವಾಗ ಸಂಬಂಧ ಇತ್ತು, ಗೋಲ್ಮಾಲ್ ಮಾಡಿದಾಗ ಸಂಬಂಧವೇ ಇಲ್ಲ ಎನ್ನುವ ‘ಶಿಷ್ಟಾಚಾರ’ವನ್ನು ಯಾರಿಗೂ ಕಲಿಸಲು ಹೋಗಬೇಡಿ’ ಎಂದು ಲೇವಡಿ ಮಾಡಿದ್ದಾರೆ.

‘ಆರೆಸ್ಸೆಸ್ ಬಗ್ಗೆ ದೇಶದ ಬಹುಸಂಖ್ಯಾತರು ಒಪ್ಪಿಕೊಂಡಿದ್ದಾರೆಂದು ಪ್ರಹ್ಲಾದ್ ಜೋಶಿ ಹೇಳುತ್ತಿದ್ದಾರೆ. ಆದರೆ, ಬಹುಸಂಖ್ಯಾತರ ಭಾವನೆಗಳನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಅಧಿಕಾರಕ್ಕೇರುವುದು ಜೋಶಿಯಂತಹ ಪೇಶ್ವೆ ಮನಸ್ಥಿತಿಯ ರಾಜಕಾರಣಿಗಳ ರಾಜಕೀಯ ತಂತ್ರ ಎಂದು ಕುಮಾರಸ್ವಾಮಿಯವರೇ ಹೇಳಿದ್ದನ್ನು ಮೊದಲು ನೆನಪಿಸಿಕೊಳ್ಳಲಿ. ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರೇ ಜೋಶಿಯನ್ನು ‘ಮರಾಠಿ ಪೇಶ್ವೆ ವಂಶಸ್ಥ’ ಎಂದು ಕರೆದಿದ್ದನ್ನು ಮರೆತಿದ್ದಾರೆಯೇ?’ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

‘ತಾವೇ ಬೆಳೆದ ಬೆಳೆಯಲ್ಲಿ ಪಾರ್ಥೇನಿಯಂ ಬೆಳೆದಂತೆ ಆಗಿದೆ ಬಿಜೆಪಿಯ ಪರಿಸ್ಥಿತಿ. ‘ಜೋಶಿ ಅಂತಹ ಪಾರ್ಥೇನಿಯಂ' ಎಂದು ಎಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದರು. ಅಂತಹ ಪಾರ್ಥೇನಿಯಂ ಜೊತೆಗೆ ನಮ್ಮ ಗಂಭೀರ ಚರ್ಚೆಯಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಖ್ ಹತ್ಯಾಕಾಂಡವನ್ನು ನೆನಪಿಸಿದ್ದಾರೆ. ಆ ಘಟನೆಗೆ ಸಂಬಂಧಿಸಿದಂತೆ ತನಿಖೆಗಳು ನಡೆದಿವೆ, ನ್ಯಾಯಾಂಗ ಪ್ರಕ್ರಿಯೆಗಳು ನಡೆದಿವೆ ಮತ್ತು ಕಾಂಗ್ರೆಸ್ ಪಕ್ಷವೂ ಹಲವು ಸಂದರ್ಭಗಳಲ್ಲಿ ವಿಷಾದ ವ್ಯಕ್ತಪಡಿಸಿದೆ.

‘ಘಟನೆಗೆ ಕಾರಣರಾದ ಎಲ್ಲರನ್ನು ಪಕ್ಷದಿಂದ ಉಚ್ಚಾಟಿಸಿ ಕಾಂಗ್ರೆಸ್ ತೀವ್ರತರವಾದ ಕ್ರಮಗಳನ್ನೂ ತೆಗೆದುಕೊಂಡಿದೆ. ಈಗ ಅದೇ ಧೈರ್ಯದಿಂದ ಜೋಶಿಯವರು 2002ರ ಗುಜರಾತ್ ಹತ್ಯಾಕಾಂಡದ ಬಗ್ಗೆ ಉತ್ತರಿಸಲಿ. ಗುಜರಾತ್ ಗಲಭೆ ಮಾಡಿ ನೂರಾರು ಮಹಿಳೆಯರು ಮಕ್ಕಳನ್ನು ಕೊಂದು ಸಜೀವ ದಹನ ಮಾಡಿದ ಆರೋಪಕ್ಕೆ ಕಾರಣರಾಗಿ ಗಡಿಪಾರಾದ ವ್ಯಕ್ತಿ ಈಗ ದೇಶದ ಗೃಹ ಸಚಿವರಾಗಿದ್ದಾರೆ. ರಾಜೀನಾಮೆ ಕೇಳುವ ಧೈರ್ಯ ಇದೆಯೇ? ಅಥವಾ ಕನಿಷ್ಟ ಪಕ್ಷ ವಿಶಾದವನ್ನಾದರೂ ವ್ಯಕ್ತಪಡಿಸುವ ಮಾನವೀಯತೆ ಉಳಿದಿದಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಗುಜರಾತ್‍ನ ಅಂದಿನ ಡಿಜಿಪಿ ಸಂಜೀವ್ ಭಟ್ ಪ್ರಕಾರ ಗುಜರಾತ್ ಗಲಭೆಗೆ ಕಾರಣವೇ ಅಂದಿನ ಮುಖ್ಯಮಂತ್ರಿಯಾಗಿದ್ದ, ಈಗಿನ ಪ್ರಧಾನಿ ಮೋದಿ. ವಡೋದರದ ಬೀದಿಯಲ್ಲಿ ಗರ್ಭಿಣಿ ಹೆಣ್ಣುಮಗಳ ಹೊಟ್ಟೆಯಲ್ಲಿ ತ್ರಿಶೂಲ ಚುಚ್ಚಿ ಮೆರವಣಿಗೆ ಮಾಡಿದ ಗೂಂಡಾಗಿರಿ ಸಂಸ್ಕೃತಿ ಯಾರದ್ದು?. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರ ಮತ್ತು ಹತ್ಯೆಗೆ ಶಿಕ್ಷೆಗೊಂಡ ಅಪರಾಧಿಗಳು ಬಿಡುಗಡೆಯಾದಾಗ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಿದವರು ಯಾರ ಸೈದ್ದಾಂತಿಕ ಪರಿವಾರದವರು ಎಂಬುದನ್ನು ದೇಶವೇ ನೋಡಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ಬಿ.ಕೆ.ಹರಿಪ್ರಸಾದ್ ಅವರು ಗೂಂಡಾಗಿರಿ ಅನುಭವದಿಂದ ಹೇಳಿಕೆ ನೀಡಿದ್ದಾರೆ ಎಂದು ‘ಪಾರ್ಥೇನಿಯಂ ಜೋಶಿ'ಯವರು ಹೇಳಿದ್ದಾರೆ. ನಾನು ಹಿಂದುತ್ವದ ಹೆಸರಿನಲ್ಲೋ, ಜಾತಿ ಹೆಸರಿನಲ್ಲೋ ಗೂಂಡಾಗಿರಿ ಮಾಡಿಲ್ಲ. ನನ್ನ ಮೇಲೆ ಜಾತ್ಯತೀತತೆ, ಸಂವಿಧಾನ ರಕ್ಷಣೆಗಾಗಿ ನಡೆದ ಹೋರಾಟಕ್ಕಾಗಿನ ಪ್ರಕರಣ ಹೊರತುಪಡಿಸಿದರೆ ಇನ್ನಾವುದೇ ಪ್ರಕರಣವೂ ಇಲ್ಲ’ ಎಂದು ಅವರು ವಿವರಣೆ ನೀಡಿದ್ದಾರೆ.

 

‘ನಾನು ‘ಪಾರ್ಥೇನಿಯಂ ಜೋಶಿ'ಯವರ ಹೈಕಮಾಂಡ್‍ನಂತೆ ಯಾವತ್ತೂ ಗಡಿಪಾರಾಗಿಲ್ಲ. ನಾನು ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗಾಗಿನ ಹೋರಾಟದ ಮೂಲಕ ರಾಜಕೀಯ ಮಾಡುತ್ತಿದ್ದೇನೆ. ಎಚ್‍ಡಿಕೆಯವರಿಂದ ಪೇಶ್ವೆ ಬಿರುದಾಂಕಿತ ಜೋಶಿಯವರು ಸಮಾಜವನ್ನು ಧರ್ಮ, ಜಾತಿ ಮತ್ತು ದ್ವೇಷದ ಹೆಸರಿನಲ್ಲಿ ವಿಭಜಿಸಿ, ಹಿಂದುಳಿದವರನ್ನು ಜೈಲಿಗೆ ಕಳುಹಿಸಿ, ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ವಾತಾವರಣ ನಿರ್ಮಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ, ಏರುತ್ತಾರೆ. ಇದುವೇ ನಿಜವಾದ ಸೈದ್ದಾಂತಿಕ ಗೂಂಡಾಗಿರಿಯ ರಾಜಕಾರಣ’

-ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News