‘ಎಸ್‍ಐಆರ್’ ಬಿಎಲ್‍ಒಗಳ ಮೇಲಿನ ಒತ್ತಡ ಕಡಿಮೆ ಮಾಡಲು ಆಗ್ರಹ
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆ ಸಾರ್ವಜನಿಕರಿಗೆ ಮಾತ್ರವಲ್ಲದೇ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‍ಒ)ಮೇಲೂ ತೀವ್ರ ಸಂಕಷ್ಟವನ್ನು ಉಂಟುಮಾಡಿದೆ. ಚುನಾವಣಾ ಆಯೋಗವು ಈಗಲಾದರೂ ಬಿಎಲ್‍ಒಗಳ ಸಂಕಷ್ಟವನ್ನು ನಿವಾರಿಸುವ ಉದ್ದೇಶದಿಂದ ಎಸ್‍ಐಆರ್ ಪ್ರಕ್ರಿಯೆಯ ಅವಧಿಯನ್ನು ಕನಿಷ್ಠ ಆರು ತಿಂಗಳವರೆಗೆ ವಿಸ್ತರಿಸಬೇಕು ಎಂದು ‘ನಾಗರಿಕ ಮತಕಾವಲು ಸಮಿತಿ’ ಆಗ್ರಹಿಸಿದೆ.
ರವಿವಾರ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ರೈತ ಹೋರಾಟಗಾರ ಜೆ.ಎಂ.ವೀರಸಂಗಯ್ಯ, ಎದ್ದೇಳು ಕರ್ನಾಟಕದ ಅಮ್ಜದ್ ಪಾಷಾ, ವಿಚಾರವಾದಿಗಳ ವೇದಿಕೆಯ ನಾಗೇಶ್ ಅರಳಕುಪ್ಪೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬಿಎಲ್‍ಒಗಳ ಸಂಕಷ್ಟದ ಕುರಿತು ಮತ್ತು ಬೂತ್ ಮಟ್ಟದ ವರದಿಗಳು ನಾಗರಿಕ ಮತಕಾವಲು ಸಮಿತಿಗೆ ಲಭ್ಯವಾಗುತ್ತಿವೆ. ಮಾಹಿತಿಯ ಪ್ರಕಾರ ನಾಲ್ಕಕ್ಕು ಹೆಚ್ಚು ಬಿಎಲ್‍ಒಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಬಹುತೇಕ ಬಿಎಲ್‍ಒಗಳು ತೀವ್ರ ಮಾನಸಿಕ ಒತ್ತಡದ ನಡುವೆಯೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ಎಸ್‍ಐಆರ್ ಅತ್ಯಂತ ವ್ಯಾಪಕವಾದ ಪ್ರಕ್ರಿಯೆಯಾಗಿದ್ದು, ಅಗತ್ಯ ಪೂರ್ವಸಿದ್ಧತೆ, ಸಮರ್ಪಕ ತರಬೇತಿ ಹಾಗೂ ಸೂಕ್ತ ಯೋಜನೆಯಿಲ್ಲದೆ ಆರಂಭಿಸಿರುವ ಪರಿಣಾಮ ಬಿಎಲ್‍ಒಗಳ ಮೇಲೆ ಅತಿಯಾದ ಒತ್ತಡ ಉಂಟಾಗಿದೆ. ಅಲ್ಲದೆ, ಸಾರ್ವಜನಿಕರು ಮತ್ತು ಬಿಎಲ್‍ಒಗಳ ನಡುವೆ ಅನಗತ್ಯ ವಾದ-ವಿವಾದ ಹಾಗೂ ಸಂಘರ್ಷಗಳಿಗೂ ಕಾರಣವಾಗುತ್ತಿದೆ. ಈ ಎಲ್ಲ ಒತ್ತಡಗಳು ಹಾಗೂ ಸಂಭವಿಸಿರುವ ಸಾವುಗಳಿಗೆ ಅವೈಜ್ಞಾನಿಕ ಪ್ರಕ್ರಿಯೆಯೆ ಕಾರಣ. ಈ ದುರಂತಕ್ಕೆ ಚುನಾವಣಾ ಆಯೋಗ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಎಸ್‍ಐಆರ್ ಕುರಿತು ನಾಗರಿಕ ಅಭಿಪ್ರಾಯಗಳಿಗೆ ಮಾನ್ಯತೆ ನೀಡದೆ, ಚುನಾವಣಾ ಆಯೋಗ ಏಕಪಕ್ಷೀಯವಾಗಿ ಮುಂದುವರಿಸುತ್ತಿರುವುದು ವಿಷಾದನೀಯ. ಬಿಎಲ್‍ಒಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ವಾರ್ಷಿಕ 12ಸಾವಿರ ರೂ.ಸಾಮಾನ್ಯ ಭತ್ಯೆಯು, ಈ ಹೆಚ್ಚುವರಿ ಜವಾಬ್ದಾರಿಗೆ ಯಾವುದೇ ರೀತಿಯಲ್ಲೂ ಸಮರ್ಪಕವಾಗಿಲ್ಲ. ಎಸ್‍ಐಆರ್ ಕಾರ್ಯದಲ್ಲಿ ತೊಡಗಿರುವ ಬಿಎಲ್‍ಒಗಳಿಗೆ ವಿಶೇಷ ಭತ್ಯೆ ಮಂಜೂರು ಮಾಡಬೇಕು. ಸಾರ್ವಜನಿಕರು ಬಿಎಲ್‍ಒಗಳೊಂದಿಗೆ ಸಂಯಮದಿಂದ ವರ್ತಿಸಿ ಅವರು ಎದುರಿಸುತ್ತಿರುವ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಅಗತ್ಯ ಸಹಕಾರ ನೀಡಬೇಕು ಎಂದು ಹೋರಾಟಗಾರರು ಮನವಿ ಮಾಡಿದ್ದಾರೆ.