ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಟಿಂಗ್ ಆಪರೇಶನ್ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಫ್‍ಐಆರ್ ದಾಖಲಿಸಿ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರ್ ಹತ್ತು ಸಚಿವರ ವಿರುದ್ಧ ಸ್ಟಿಂಗ್ ಆಪರೇಶನ್ ಆಗಿದೆ, ಸಿ.ಡಿ. ಇದೆ. ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದೆ ಎಂದೆಲ್ಲ ಹೇಳಿದ್ದಾರೆ. ಇಡೀ ಸಂಪುಟ ಇದೀಗ ಮಲಿನವಾಗಿದೆ. ಸಚಿವರು ಭ್ರಷ್ಟಾಚಾರಿಗಳಾಗಿದ್ದು, ಯಾರೋ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಜನರು ಮಾತಾಡುತ್ತಿದ್ದಾರೆ ಎಂದು ಗಮನ ಸೆಳೆದರು.

ಒಬ್ಬ ಮುಖ್ಯಮಂತ್ರಿ ತಮ್ಮದೇ ಸಂಪುಟ ಸದಸ್ಯರ ಮೇಲೆ ಸ್ಟಿಂಗ್ ಆಪರೇಶನ್ ಆಗಿದೆ ಎಂದರೆ, ಸಚಿವರ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ. ಈಗ ಸಚಿವರು ಸಂಕೋಚದಲ್ಲೇ ಇರಬೇಕಾ?. ರಾಜೀನಾಮೆ ನೀಡಬೇಕಾ ಎಂದು ಗೊತ್ತಿಲ್ಲ. ಏಕೆಂದರೆ ಎಲ್ಲ ಸಚಿವರ ಮೇಲೂ ಈಗ ಅನುಮಾನ ಇದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲೇ ಹೋದರೂ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ತಾಕತ್ತಿದ್ದರೆ ಸ್ಟಿಂಗ್ ಆಪರೇಶನ್ ಮಾಡಿದವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಹೀಗೆ ಮಾಡಿದವರು ಇದೇ ರಾಜ್ಯದವರಾ? ಹೊರ ರಾಜ್ಯದವರಾ? ಇದಕ್ಕೆ ಎಷ್ಟು ಹಣ ಖರ್ಚಾಗಿದೆ ಹೀಗೆ ಎಲ್ಲ ವಿಷಯಗಳು ತನಿಖೆಯಿಂದ ಹೊರಗೆ ಬರಬೇಕಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ನಂತರ ಮೌನಕ್ಕೆ ಜಾರಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲೂ ಅವರು ಮೌನಕ್ಕೆ ಶರಣಾಗಿದ್ದರು. ಅವರಿಗೆ ಇದೀಗ ಗರ ಬಡಿದಂತೆ ಆಗಿದೆ. ಅವರು ಸಿಎಂ ಆಗಿ ಕೆಲಸ ಮಾಡಿದ್ದು, ಜನರಿಗೆ ಅವರ ಮೇಲೆ ಅಪಾರ ಗೌರವ ಇದೆ. ಈ ಸಂದರ್ಭದಲ್ಲಾದರೂ ಅವರು ಮಾತಾಡಿ ಜನರ ಮನಸ್ಸಿನ ಗೊಂದಲವನ್ನು ಬಗೆಹರಿಸಬೇಕು ಎಂದು ಅಶೋಕ್ ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor