ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಬೇಡಿ : ವಿಜಯೇಂದ್ರ
ಬೆಂಗಳೂರು : ‘ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಮೀಸಲಾತಿ ಸೇರಿದಂತೆ ಇನ್ನಿತರ ವಿಚಾರದ ನೆಪದಲ್ಲಿ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡಬೇಡಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಮನವಿ ಮಾಡಿದ್ದಾರೆ.
ರವಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಚಿವ ಡಿ.ಸುಧಾಕರ್ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ ಎಂದರು.
ಪ್ರಭಾರಿಗಳ ನೇಮಕ: ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೂ ಪ್ರಭಾರಿಯನ್ನು ನೇಮಕ ಮಾಡಬೇಕು ಮತ್ತು ಪ್ರತಿ ಜಿಲ್ಲೆಯಲ್ಲಿ ತಕ್ಷಣವೇ ಚುನಾವಣಾ ನಿರ್ವಹಣಾ ಸಮಿತಿ ರಚಿಸಬೇಕೆಂದು ಕೋರ್ ಕಮಿಟಿನಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು.
ಸ್ಟಿಂಗ್ ವಿಷಯದಲ್ಲಿ ಆಡಳಿತ ಪಕ್ಷದ ಶಾಸಕರು, ಆಡಳಿತ ಪಕ್ಷದ ಸಚಿವರು ಸಿಕ್ಕಿಹಾಕಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟ, ಹಗ್ಗ-ಜಗ್ಗಾಟದಲ್ಲಿ ಅವರವರೇ ಸ್ಟಿಂಗ್ ಮಾಡ್ಕೊಂಡಿದ್ದಾರೆಂಬ ಚರ್ಚೆ ನಡೆಯುತ್ತಿದೆ. ಈ ಸ್ಟಿಂಗ್ ಆಪರೇಷನ್‍ನಲ್ಲಿ ನಾವು ಮಾತಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಉಪ್ಪು ತಿಂದವನು ನೀರು ಕುಡಿಯಲೇಬೇಕಾಗುತ್ತದೆ. ಇದರ ಸತ್ಯಾಸತ್ಯತೆ ಏನು ಎಂದು ಹೊರಗೆ ಬರಲಿ ಎಂದು ಅವರು ನುಡಿದರು.
ಅಭ್ಯರ್ಥಿ ಆಯ್ಕೆಗೆ ಚರ್ಚೆ: ಹಿರಿಯೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿಯಿಂದಲೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ. ಮಿತ್ರ ಪಕ್ಷ ಜೆಡಿಎಸ್ ವಿಶ್ವಾಸದೊಂದಿಗೆ ಬಿಜೆಪಿ ಅಭ್ಯರ್ಥಿ ಸ್ಫರ್ಧೆಯ ಸಾಧಕ-ಬಾಧಕಗಳ ಬಗ್ಗೆ ನಾಯಕರು ಚರ್ಚಿಸಿದ್ದು, ಮೂರು ಅಥವಾ ನಾಲ್ಕು ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ದಪಡಿಸುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಕೋರ್ ಕಮಿಟಿ ನೀಡಿದೆ ಎಂದು ಗೊತ್ತಾಗಿದೆ.