ಬೆಂಗಳೂರು : ಅಡವಿಟ್ಟಿದ್ದ ಮೊಬೈಲ್ ಹಿಂಪಡೆಯುವ ವಿಚಾರಕ್ಕೆ ಪರಿಚಿತರಿಬ್ಬರ ನಡುವೆ ಗಲಾಟೆ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ ನಗರದ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ಬಳಿ ಶನಿವಾರ(ಅ.10) ರಾತ್ರಿ ಘಟನೆ ನಡೆದಿದೆ.

ಮಂಜುನಾಥ್ ಯಾನೆ ಕೋಳಿ ಮಂಜು ಎಂಬಾತನನ್ನು ದೊಣ್ಣೆಯಿಂದ ಹೊಡೆದು ತೀವ್ರವಾಗಿ ಹಲ್ಲೆಗೈದು ಹತ್ಯೆಗೈಯ್ಯಲಾಗಿದೆ. ಕೃತ್ಯ ಎಸಗಿರುವ ಆರೋಪಿ ಪಳನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಂಜುನಾಥ್ ಹಾಗೂ ಆರೋಪಿ ಪಳನಿ ಇಬ್ಬರೂ ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ಮಂಜುನಾಥನ ಬಳಿ ಕೆಲವು ದಿನಗಳ ಹಿಂದಷ್ಟೇ ಆರೋಪಿ ಪಳನಿ ತನ್ನ ಮೊಬೈಲ್ ಫೋನ್ ಅಡವಿಟ್ಟು ಹಣ ಪಡೆದಿದ್ದ.

ಶನಿವಾರ ರಾತ್ರಿ ನಗರದ ವಿದ್ಯಾಪೀಠ ಸರ್ಕಲ್ ಬಳಿಯಲ್ಲಿನ ಬಾರ್ ಹತ್ತಿರ ಇಬ್ಬರ ಭೇಟಿಯಾಗಿದೆ. ಈ ವೇಳೆ, ಅಡವಿಟ್ಟಿದ್ದ ಮೊಬೈಲ್ ಫೋನ್‍ನ್ನು ತಕ್ಷಣ ವಾಪಸ್ ನೀಡುವಂತೆ ಮಂಜುನಾಥನ ಬಳಿ ಪಳನಿ ಕೇಳಿದ್ದಾನೆ. ಆಗ ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ದೊಡ್ಡ ಗಲಾಟೆಯಾಗಿದೆ.

ಇದೇ ವೇಳೆ ಆಕ್ರೋಶಗೊಂಡ ಪಳನಿ, ಸ್ಥಳದಲ್ಲೇ ಇದ್ದ ದೊಣ್ಣೆಯಿಂದ ಮಂಜುನಾಥನ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಬಲವಾಗಿ ಹೊಡೆದಿದ್ದಾನೆ. ಹೊಡೆತದ ತೀವ್ರತೆಗೆ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸಿ.ಕೆ.ಅಚ್ಚುಕಟ್ಟು ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು, ಆರೋಪಿ ಪಳನಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor