ಕೇಂದ್ರದಿಂದ 2,186 ಕೋಟಿ ರೂ. ಬಾಕಿ, ಇದರ ವಿರುದ್ಧ ಕೋರ್ಟ್ ಮೊರೆ: ಈಶ್ವರ ಖಂಡ್ರೆ
"ವರ್ಷಾಂತ್ಯದೊಳಗೆ ಪಂಚಾಯತ್ ಚುನಾವಣೆ ನಡೆಸಲು ಸಿದ್ಧತೆ"
ಬೆಂಗಳೂರು, ಸೆ.10: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಗ್ರಾಮ ಪಂಚಾಯತ್ ಗಳಿಗೆ ಬರಬೇಕಾದ 2186.20 ಕೋಟಿ ರೂ. ಅನುದಾನ ತಡೆಹಿಡಿದಿರುವ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆಸಿದ ಸಚಿವರು 2025-26ನೇ ಸಾಲಿನಲ್ಲಿ ರಾಜ್ಯದ ಗ್ರಾಮ ಪಂಚಾಯತ್ ಗಳಿಗೆ ಹಂಚಿಕೆ ಮಾಡಿದ್ದ 2186.20 ಕೋಟಿ ರೂ. ಬಿಡುಗಡೆ ಮಾಡಲು ನಿರಾಕರಿಸಿರುವ ಕೇಂದ್ರ ಸರಕಾರದ ನಡೆಗೆ ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಬರಪರಿಸ್ಥಿತಿ ತಲೆದೋರಿದ್ದು, 710 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. 149 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 561 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆಯದೆ ರೈತರು ಕಂಗಾಲಾಗಿರುವ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಈ ರೀತಿ ನ್ಯಾಯಯುತ ಹಂಚಿಕೆಯನ್ನೇ ಬಿಡುಗಡೆ ಮಾಡದಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಕಾನೂನು ಅಂಶಗಳ ಬಗ್ಗೆ ಚರ್ಚಿಸಿದರು.
ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ಧತೆ:
ರಾಜ್ಯ ಸರಕಾರ ಅವಧಿ ಮುಗಿದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಎಸ್.ಐ.ಆರ್. ಕಾರ್ಯಕ್ಕೆ ಸರಕಾರಿ ಸಿಬ್ಬಂದಿ ನಿಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಗ್ರಾಪಂ ಚುನಾವಣೆಗೆ ಸರ್ಕಾರ ಸಂಪೂರ್ಣ ಸಜ್ಜಾಗಿದ್ದು, ಶೀಘ್ರವೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ.ರಣದೀಪ್ ಅವರೊಂದಿಗೆ ಚುನಾವಣೆ ನಡೆಸುವ ಕುರಿತ ಕಾನೂನು ಅಂಶಗಳ ಬಗ್ಗೆ ಮಾಹಿತಿ ಪಡೆದರು.