ಬೆಂಗಳೂರು : ಕ್ಷುಲ್ಲಕ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆದು ಹತ್ಯೆ ಹಾಗೂ ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಭೂತಿಪುರದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ.

ಶೃತಿ (30) ಹತ್ಯೆಯಾದ ಗೃಹಿಣಿ. ಬಿಯರ್ ಬಾಟಲಿಯಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿ ರಾಘವೇಂದ್ರ(36) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳನ್ನು ಶೃತಿಯ ಪೋಷಕರ ಮನೆಯಲ್ಲಿ ಬಿಟ್ಟು ಇಬ್ಬರೂ ಬೆಂಗಳೂರಿನ ವಿಭೂತಿಪುರದಲ್ಲಿ ವಾಸವಿದ್ದರು. ದಂಪತಿ ವಾಸವಿದ್ದ ಕಟ್ಟಡದ ಮೇಲ್ಮಹಡಿಯಲ್ಲಿಯೇ ರಾಘವೇಂದ್ರನ ಪೋಷಕರು ವಾಸವಿದ್ದರು.

ರಾಘವೇಂದ್ರ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಶೃತಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ಮನೆಕೆಲಸ ಮಾಡಿಕೊಂಡಿದ್ದರು. ಪತ್ನಿ ಅಡುಗೆ ಮಾಡಲ್ಲ, ಅತಿಯಾಗಿ ಮೊಬೈಲ್ ಫೋನ್ ಬಳಸುತ್ತಿರುತ್ತಾಳೆ ಎಂದು ಆಗಾಗ್ಗೆ ರಾಘವೇಂದ್ರ ಗಲಾಟೆ ಮಾಡುತ್ತಿದ್ದ. ಇತ್ತ ಪತಿ ಸಹ ಮದ್ಯಪಾನ ಮಾಡುತ್ತಾನೆ ಎಂದು ಶೃತಿ ಆರೋಪಿಸಿದ್ದಳು. ಇಬ್ಬರ ನಡುವಿನ ಈ ಗಲಾಟೆ ಇತ್ತೀಚಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಇಬ್ಬರಿಗೂ ಪೊಲೀಸರು ಬುದ್ಧಿವಾದ ಹೇಳಿ ಕಳಿಸಿದ್ದರು.

ಸೆ.8ರ ಮಂಗಳವಾರ ರಾತ್ರಿ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ರಾಘವೇಂದ್ರ, ಖಾಲಿ ಬಿಯರ್ ಬಾಟಲಿಯಿಂದ ಪತ್ನಿ ಶೃತಿಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಶೃತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಿನ ನಂತರ ತಾನೂ ಸಹ ನೇಣು ಬಿಗಿದುಕೊಂಡು ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್‌ ಅಡಾವತ್ ವಿವರಿಸಿದ್ದಾರೆ.

ಘಟನೆಯ ಸ್ಥಳಕ್ಕೆ ಎಚ್‍ಎಎಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸೈದುಲ್ ಅಡಾವತ್ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor