ಜ್ಞಾನೇಂದ್ರ ಕುಮಾರ್ 

ಬೆಂಗಳೂರು : ಕೆಪಿಎಸ್‍ಸಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಸಿಐಡಿ ವಶದಲ್ಲಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಹಿತ ಇಬ್ಬರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಒಂದನೇ ಎಸಿಜೆಎಂ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಶದಲ್ಲಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ನಡುವೆ ಆರೋಪಿಗಳ ಕಸ್ಟಡಿ ಅವಧಿ ಮುಗಿದ ಕಾರಣ ಸಿಐಡಿ ಅಧಿಕಾರಿಗಳು ಬುಧವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಸದ್ಯಕ್ಕೆ ಹೆಚ್ಚಿನ ತನಿಖೆಗೆ ಕಸ್ಟಡಿ ಅಗತ್ಯವಿಲ್ಲ ಎಂದು ಸಿಐಡಿ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಇಬ್ಬರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ಬದಲಾವಣೆ ಹಾಗೂ ಅಕ್ರಮವಾಗಿ ಹುದ್ದೆ ಮಾರಾಟ ಮಾಡಿದ ಗಂಭೀರ ಆರೋಪಗಳು ಕೇಳಿಬಂದಿವೆ.

ಮಧ್ಯಂತರ ಜಾಮೀನಿಗೆ ಜ್ಞಾನೇಂದ್ರ ಕುಮಾರ್ ಅರ್ಜಿ: ಈ ಪ್ರಕರಣದ ಐದನೇ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಅನಾರೋಗ್ಯದ ಕಾರಣ ಮುಂದಿಟ್ಟುಕೊಂಡು ಮಧ್ಯಂತರ ಜಾಮೀನು ಕೋರಿ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಬೆನ್ನು ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಅರ್ಜಿಯಲ್ಲಿ ಉಲ್ಲೇ ಖಿಸಿರುವ ಅವರು, ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಜಾಮೀನು ಅರ್ಜಿಯ ವಿಚಾರಣೆಯೂ ಗುರುವಾರ(ಸೆ.10) ನಡೆಯಲಿದೆ.

ಆರೋಪಿ ಮನೆಗಳಲ್ಲಿ ಸಿಐಡಿ ಶೋಧ: ಕೆಪಿಎಸ್‍ಸಿ ಅಕ್ರಮ ಪ್ರಕರಣದ ಮತ್ತೊಬ್ಬ ಆರೋಪಿ ಶಾಂತ ಹೊಸಮನಿ ಅವರ ಬೆಂಗಳೂರಿನ ಹೊಸಕೆರೆಹಳ್ಳಿ ಹಾಗೂ ನಾಗರಬಾವಿಯಲ್ಲಿರುವ ನಿವಾಸಗಳ ಮೇಲೆ ಸಿಐಡಿ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ. ಈ ದಾಳಿ ಸಂದರ್ಭದಲ್ಲಿ ಶಾಂತ ಹೊಸಮನಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಆಕೆಯ ಅನುಪಸ್ಥಿತಿಯಲ್ಲಿಯೇ ಅಧಿಕಾರಿಗಳು ಮನೆಗಳನ್ನು ಪರಿಶೀಲಿಸಿದ್ದು, ಪ್ರಕರಣದ ತನಿಖೆಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor