ಹಂತ-ಹಂತವಾಗಿ ಕಾಮಗಾರಿಗಳ ಬಾಕಿ ಬಿಲ್ ಪಾವತಿ : ಸತೀಶ್ ಜಾರಕಿಹೊಳಿ
ಬೆಂಗಳೂರು : 2024-25ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಗೆ 10,023 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಹಂತ ಹಂತವಾಗಿ ಬಾಕಿ ಬಿಲ್ಲುಗಳನ್ನು ಪಾವತಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2024-25 ಸಾಲಿಗೆ ಒದಗಿಸಿದ ಅನುದಾನದಲ್ಲಿ ಫೆಬ್ರವರಿ-25ರ ಮಾಹೆಯ ಅಂತ್ಯಕ್ಕೆ 8,392 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಬಾಕಿ ಬಿಲ್ಲುಗಳನ್ನು ತೀರುವಳಿ ಮಾಡಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯಲ್ಲಿ ಫೆಬ್ರವರಿ 2025ರ ಅಂತ್ಯಕ್ಕೆ 8925 ಕೋಟಿ ರೂ. ಮೊತ್ತದ ಬಿಲ್ಲುಗಳು ಪಾವತಿಗೆ ಬಾಕಿಯಿರುತ್ತದೆ. ಈ ಬಾಕಿ ಬಿಲ್ಲುಗಳ ತೀರುವಳಿಗೆ ಪ್ರಸಕ್ತ ಸಾಲಿಗೆ ಒದಗಿಸಿರುವ ಅನುದಾನ ಹಾಗೂ ಮುಂದೆ ಒದಗಿಸಲಾಗುವ ಅನುದಾನದ ಲಭ್ಯತೆಯನ್ನಾಧರಿಸಿ ಹಂತ ಹಂತವಾಗಿ ಕಾಮಗಾರಿಗಳ ಬಾಕಿ ಬಿಲ್ಲುಗಳನ್ನು ಪಾವತಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.