×
Ad

ರಾಜ್ಯದಲ್ಲಿ ಬಯೋಡೀಸಲ್ ರೀಟೆಲ್ ಔಟ್ ಲೆಟ್‌ಗಳ ಸ್ಥಾಪನೆಗೆ ಅದ್ಯತೆ : ಎಸ್.ಈ.ಸುಧೀಂದ್ರ

Update: 2025-03-04 17:49 IST

ಬೆಂಗಳೂರು: ರಾಜ್ಯದಲ್ಲಿ ಉದ್ದೇಶಿತ ಬಯೋಡೀಸಲ್ (ಬಿ-100) ಬಳಕೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಬಯೋಡೀಸಲ್ ರೀಟೆಲ್ ಔಟ್ ಲೆಟ್‌ಗಳ ಸ್ಥಾಪನೆಗೆ ಅದ್ಯತೆ ನೀಡಲಾಗುವುದು ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ರಾಜ್ಯದಲ್ಲಿ ಬಯೋಡೀಸಲ್ ಮಾರಾಟಕ್ಕಾಗಿ ರೀಟಲ್ ಔಟ್ ಲೆಟ್ ಗಳನ್ನು ಆರಂಭಿಸಲು ಪರವಾನಗಿಗಳನ್ನು ನೀಡುವ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ  ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಾಲಯ 2019ರಲ್ಲಿಯೇ ರಾಷ್ಟ್ರದಲ್ಲಿ ಬಯೋಡೀಸಲ್‌ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮತಿಸಿರುವುದನ್ನು ಎಸ್.ಈ.ಸುಧೀಂದ್ರ ಅವರು  ಸಚಿವರ ಗಮನಕ್ಕೆ ತಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿ ಕುರಿತು ವಿಶೇಷ ಆಸಕ್ತಿ ವಹಿಸಿರುವುದರ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದ ಎಸ್.ಈ.ಸುಧೀಂದ್ರ ಅವರು, ಚಾಲ್ತಿಯಲ್ಲಿರುವ ಜೈವಿಕ ಇಂಧನ ಯೋಜನೆಗಳ ಜೊತೆಗೆ ರಾಜ್ಯಕ್ಕೆ ನೂತನ ಜೈವಿಕ ಇಂಧನ ನೀತಿಯನ್ನು ರೂಪಿಸುವ ದಿಸೆಯಲ್ಲಿ ಕಾರ್ಯತತ್ಪರವಾಗಿರುವುದನ್ನು ಸಚಿವರ ಗಮನಕ್ಕೆ ತಂದರು.

ಇದೇ ವೇಳೆ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು, ರಾಜ್ಯದಲ್ಲಿ ಬಿ-100 ಬಳಕೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಬಯೋಡೀಸಲ್ ರೀಟೆಲ್ ಔಟ್ ಲೆಟ್ ಗಳ ಸ್ಥಾಪನೆಗೆ ಅದ್ಯತೆಯನ್ನು ನೀಡಲು ಸಚಿವರನ್ನು ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಕೆಎಚ್‌ ಮುನಿಯಪ್ಪ ಅವರು, ಕೂಡಲೇ ಸಭೆಯಲ್ಲಿದ್ದ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿ ಇನ್ನೊಂದು ವಾರದಲ್ಲಿ ಸೂಕ್ತ ಆದೇಶ ಹೊರಡಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ಈ ಸಭೆಯಲ್ಲಿ ಆಹಾರ, ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಜೈನ್ , ಆಯುಕ್ತರಾದ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಎಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್.ಲೋಹಿತ್, ಯೋಜನಾ ಸಲಹೆಗಾರರಾದ ಡಾ.ದಯಾನಂದ ಜಿ.ಎನ್ ಸೇರಿ ಇಲಾಖೆ ಹಾಗೂ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News