ಎಸ್‌ಐಆರ್ | ಅ.10ರಂದು ರಾಜ್ಯಾದ್ಯಂತ ಪಂಜಿನೊಂದಿಗೆ ಪ್ರತಿರೋಧ ಸಭೆ ನಡೆಸಲು ಕರೆ
ಸಾಂದರ್ಭಿಕ ಚಿತ್ರ
ಬೆಂಗಳೂರು 9: ಎಸ್‌ಐಆರ್ ರದ್ದತಿ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹಿಸಿ ಅ.10ರಂದು ಸಂಜೆ 5 ಗಂಟೆಗೆ ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪಂಜಿನೊಂದಿಗೆ ಧರಣಿ ಹಾಗೂ ಪ್ರತಿರೋಧ ಸಭೆಗಳನ್ನು ಆಯೋಜಿಸುವಂತೆ ನಾಗರಿಕ ಸಂಘಟನೆಗಳು, ಪ್ರಜಾಸತ್ತಾತ್ಮಕ ಶಕ್ತಿಗಳು, ಯುವಜನರು ಮತ್ತು ಮತದಾರರ ಹಕ್ಕುಗಳ ಪರ ಹೋರಾಡುವ ಸಂಘಟನೆಗಳಿಗೆ ಎಸ್‌ಐಆರ್ ವಿರೋಧಿ ಒಕ್ಕೂಟ ಕರೆ ನೀಡಿದೆ.
ಶುಕ್ರವಾರ ಈ ಕುರಿತು ಒಕ್ಕೂಟದ ಪರವಾಗಿ ಹೋರಾಟಗಾರರಾದ ಕೆ.ಎಲ್.ಅಶೋಕ್, ಜೆ.ಎಂ.ವೀರಸಂಗಯ್ಯ, ಕೆ.ಮಹಂತೇಶ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ವತಿಯಿಂದ ಅ.10 ರಂದು ದಿಲ್ಲಿಯಲ್ಲಿ ನಡೆಯಲಿರುವ ಹೋರಾಟಕ್ಕೆ ಎಸ್‌ಐಆರ್ ವಿರೋಧಿ ಒಕ್ಕೂಟ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ಹಕ್ಕಾಗಿದ್ದು, ಈ ಹಕ್ಕನ್ನು ಹತ್ತಿಕ್ಕುವ ದಿಲ್ಲಿ ಪೊಲೀಸರ ಅಥವಾ ಕೇಂದ್ರ ಸರಕಾರದ ಯಾವುದೇ ಪ್ರಯತ್ನವನ್ನು ಕರ್ನಾಟಕ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.