ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : ನಿಯಮ ಬಾಹಿರವಾಗಿ ಔಷಧಗಳನ್ನು ಸಂಗ್ರಹಿಸಿ, ವಿತರಣೆ ಮಾಡುತ್ತಿದ್ದ ಇ-ಕಾಮರ್ಸ್ ಸಂಸ್ಥೆಗಳ ಅಕ್ರಮ ಗೋದಾಮುಗಳ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆಯ(ಎಫ್‍ಡಿಎ) ವಿಭಾಗವು ರವಿವಾರ ದಾಳಿ ನಡೆಸಿದೆ.

ಬೆಂಗಳೂರಿನ ಆನೇಕಲ್ ಮತ್ತು ದೇವನಹಳ್ಳಿ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪರವಾನಗಿ ಇಲ್ಲದೆ, ಕಾನೂನುಬಾಹಿರವಾಗಿ ದಾಸ್ತಾನು ಮಾಡಲಾಗಿದ್ದ 4ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ. ಅನಧಿಕೃತವಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಭಾರಿ ಪ್ರಮಾಣದ ಔಷಧಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎಫ್‍ಡಿಎ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ಈ ದಾಳಿಗಳನ್ನು ನಡೆಸಿವೆ.

ಆನೇಕಲ್‍ನಲ್ಲಿ 2.45 ಲಕ್ಷ ರೂ.ಮೌಲ್ಯದ ಔಷಧ ಜಪ್ತಿ: ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕ ಮನೋಹರ್ ಹಾಗೂ ಔಷಧ ಪರಿವೀಕ್ಷಕರ ತಂಡವು ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿರುವ ‘ಮೆಸರ್ಸ್ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿ.'ನ ಗೋದಾಮಿನ ಮೇಲೆ ದಾಳಿ ನಡೆಸಿದೆ. ಔಷಧ ಕಾಯ್ದೆಯಡಿ ಯಾವುದೇ ಅಧಿಕೃತ ಪರವಾನಗಿ ಪಡೆಯದ ಈ ಆವರಣದಿಂದ ಒಟ್ಟು 2,45,352 ರೂ.ಮೌಲ್ಯದ ಔಷಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿಯಲ್ಲಿ 1.57 ಲಕ್ಷ ರೂ. ಮೌಲ್ಯದ ಸರಕು ವಶಕ್ಕೆ: ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಔಷಧ ಪರಿವೀಕ್ಷಕಿ ವಿಭಾ ಮತ್ತು ಅವರ ತಂಡವು ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‍ನಲ್ಲಿರುವ ‘ಮೆಸರ್ಸ್ ಅಮೆಜಾನ್' ಸಂಸ್ಥೆಯ ಮತ್ತೊಂದು ಪರವಾನಗಿ ರಹಿತ ಗೋದಾಮಿನ ಮೇಲೆ ದಾಳಿ ಮಾಡಿದೆ. ಅಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ 1,57,000ರೂ.ಮೌಲ್ಯದ ಔಷಧಗಳನ್ನು ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಇಂತಹ ಅಕ್ರಮ ಸಂಗ್ರಹಣೆ ಮತ್ತು ವಿತರಣೆಯ ವಿರುದ್ಧ ಇಲಾಖೆಯು ಮುಂಬರುವ ದಿನಗಳಲ್ಲೂ ಕಠಿಣ ಕಾನೂನು ಕ್ರಮಗಳನ್ನು ಮುಂದುವರಿಸಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor