2028ರ ವೇಳೆ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ : ಸಚಿವ ಟಿ.ರಘುಮೂರ್ತಿ
ಚಿತ್ರದುರ್ಗ : ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಒದಗಿಸುವ ‘ಭದ್ರಾ ಮೇಲ್ದಂಡೆ ಯೋಜನೆ’ ಅನುಷ್ಟಾನದ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ. 2028ರ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮವಹಿಲಾಗುವುದು. ನಾಲ್ಕು ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಶ್ರಮಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು.
ರವಿವಾರ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಇನ್‍ಟೇಕ್ ಪಾಯಿಂಟ್ (ಲಕ್ಕವಳ್ಳಿ ಅಣೆಕಟ್ಟು) ನಲ್ಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಶಾಖಾ ಕಾಲುವೆ ಕಾಮಗಾರಿಗೆ ಒತ್ತು ನೀಡಿ ಶ್ರಮಿಸಿದ ಡಿ.ಸುಧಾಕರ್, ಟಿ.ಬಿ.ಜಯಚಂದ್ರ ಸಹಿತ ಎಲ್ಲ ಹಿರಿಯ ನಾಯಕರ ಕೊಡುಗೆಯನ್ನು ಸ್ಮರಿಸುತ್ತೇನೆ ಎಂದರು.
ಇಂದಿನಿಂದ ಹರಿದ ನೀರು ಇನ್ನು ಒಂದು ವಾರದಲ್ಲಿ ಗೋನೂರು ತಲುಪಲಿದ್ದು, ನೀರು ಬಂದ ನಂತರ ಈ ಯೋಜನೆಯ ಸಾಕಾರಕ್ಕೆ ಕಾರಣಕರ್ತರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಲ್ಲ ನಾಯಕರನ್ನು ಆಹ್ವಾನಿಸಿ, ಪಕ್ಷಾತೀತವಾಗಿ ಚಿತ್ರದುರ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಟಿ.ರಘುಮೂರ್ತಿ ಪ್ರಕಟಿಸಿದರು.
ದಶಕಗಳ ಕನಸು: ಇಂದು ಇತಿಹಾಸದಲ್ಲಿ ನೆನಪಿಡಬೇಕಾದ ಮಹತ್ವದ ದಿನ. ಐದಾರು ದಶಕಗಳಿಂದ ಬಯಲುಸೀಮೆ ಜನರು ಕಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ನನಸಾಗುತ್ತಿದೆ. ಈ ಯೋಜನೆಗೆ ಮುನ್ನುಡಿ ಬರೆದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಗೂ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಸೇರಿದಂತೆ ಯೋಜನೆಯ ಸಾಕಾರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಹೋರಾಟಗಾರರು, ರೈತರನ್ನು ಸ್ಮರಿಸುತ್ತೇನೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾದಿಂದ 17.4 ಟಿಎಂಸಿ ಹಾಗೂ ಭದ್ರಾದಿಂದ 12.5 ಟಿಎಂಸಿ ಸೇರಿ ಒಟ್ಟು 29.9ಟಿಎಂಸಿ ನೀರು ಹಂಚಿಕೆಯಾಗಿದೆ. ಪ್ರಸ್ತುತ ಯೋಜನೆ ವೆಚ್ಚ 21,500 ಕೋಟಿ ರೂ.ಆಗಿದೆ. ಯೋಜನೆಯಿಂದ ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳ 12 ತಾಲೂಕುಗಳಿಗೆ ಅನುಕೂಲವಾಗಲಿದೆ. ಒಟ್ಟು 2,25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಒಟ್ಟು 367 ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ ಇದಾಗಿದೆ. ತುಂಗಾದಿಂದ ಬರಬೇಕಾದ 17.4 ಟಿಎಂಸಿ ನೀರಿನ ಕಾಮಗಾರಿಗಳು ಎರಡು ಟವರ್ ಕೆಲಸ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಧರಂಸಿಂಗ್, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಿಂದ ಹಿಡಿದು ಸಿದ್ದರಾಮಯ್ಯರ ಸರಕಾರದ ವರೆಗೆ ಹಲವು ಹಂತಗಳಲ್ಲಿ ಅನುದಾನ ಹಂಚಿಕೆಯಾಗಿದೆ ಎಂದರು.
ಈ ವೇಳೆ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಶ್ರೀನಿವಾಸ್, ಬಿ.ಜಿ. ಗೋವಿಂದಪ್ಪ, ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಗಂಜಿಗಟ್ಟೆ ಶಿವಣ್ಣ, ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.