×
Ad

ಬೆಂಗಳೂರು | ಮದ್ಯದ ಅಮಲಿನಲ್ಲಿ ನಾಲ್ವರಿಗೆ ಚಾಕು ಇರಿದ ರೌಡಿಶೀಟರ್

Update: 2025-02-11 20:17 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಮದ್ಯ ಸೇವನೆಯ ಅಮಲಿನಲ್ಲಿ ರೌಡಿಶೀಟರ್ ಒಬ್ಬ ನಾಲ್ವರಿಗೆ ಚಾಕುವಿನಿಂದ ಇರಿದ ಘಟನೆ ಇಲ್ಲಿನ ಇಂದಿರಾನಗರದಲ್ಲಿ ನಡೆದಿದೆ.

ಕದಂಬ ಎಂಬಾತ ಫೆ.8ರಂದು ಈ ಕೃತ್ಯವೆಸಗಿದ್ದು, ಇಂದಿರಾನಗರದ ನಿವಾಸಿಗಳಾದ ಜಶ್ವಂತ (19), ದೀಪಕ್ ಕುಮಾರ್ ವರ್ಮಾ (24) ಮತ್ತು ತಮ್ಮಯ್ಯ (44) ಸೇರಿದಂತೆ ನಾಲ್ವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.

ಜಸ್ವಂತ್ ಎಂಬುವವರು ಫೆ.8ರ ರಾತ್ರಿ 9 ಗಂಟೆಗೆ ಇಂದಿರಾನಗರದ ಮುಖ್ಯ ರಸ್ತೆಯಲ್ಲಿರುವ ನೀರಿನ ಘಟಕಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ್ದ ಆರೋಪಿ ಚಾಕು ತೋರಿಸಿ ತಾನೂ ಸೂಚಿಸಿದ ಸ್ಥಳಕ್ಕೆ ಕರೆದೊಯ್ಯುವಂತೆ ಬೆದರಿಸಿದ್ದಾನೆ. ಆಗ ಆರೋಪಿಯನ್ನು ಇಂದಿರಾನಗರದ 4ನೆ ಕ್ರಾಸ್ ಕಡೆಗೆ ಕರೆದು ಕೊಂಡು ಹೋಗುವಾಗ ದ್ವಿಚಕ್ರ ವಾಹನವನ್ನು ಎಡಕ್ಕೆ ತಿರುಗಿಸಿದಕ್ಕೆ ಕೋಪಗೊಂಡ ಕದಂಬ ಏಕಾಏಕಿ ಚಾಕು ತೆಗೆದು ಜಸ್ವಂತ್ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.

ಅಲ್ಲಿಂದ ಇಂದಿರಾನಗರದ ನೂರಡಿ ರಸ್ತೆಯ ಕುಂಡು ಹೋಟೆಲ್ ಸಮೀಪ ದೀಪಕ್ ಕುಮಾರ್ ವರ್ಮಾ ಎಂಬುವವರ ಪಾನಿ ಪಾನಿಪೂರಿ ಅಂಗಡಿಗೆ ಹೋಗಿ ಏಕಾಏಕಿ ಚಾಕು ತೆಗೆದು ದೀಪಕ್ ಕುತ್ತಿಗೆಗೆ ಇರಿದು ಗಾಯಗೊಳಿಸಿದ್ದಾನೆ.ಹಾಗೇ, ಮತ್ತೊಂದು ಪಾನಿಪೂರಿ ಅಂಗಡಿಗೆ ಹೋಗಿ ತಮ್ಮಯ್ಯಗೆ ಇರಿದು ಪರಾರಿಯಾಗಿದ್ದಾನೆ.

ಬಳಿಕ, ರವಿವಾರ ಬೆಳಗಿನ ಜಾವ 2.30ರ ಸುಮಾರಿಗೆ 80 ಅಡಿ ರಸ್ತೆಯ ಬಳಿ ಆರೋಪಿ ಕದಂಬ, ದ್ವಿಚಕ್ರ ವಾಹನ ಚಾಲಕನೋರ್ವನ್ನು ಅಡ್ಡಗಟ್ಟಿ, ಕೆಆರ್‌ಪುರಂ ರೈಲ್ವೆ ನಿಲ್ದಾಣಕ್ಕೆ ಬಿಡುವಂತೆ ಹೇಳಿದ್ದಾನೆ. ಅದಕ್ಕೆ, ಚಾಲಕ ನಾನು ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಕುಪಿತನಾದ ಕದಂಬ ಚಾಕು ತೆಗೆದು ಇರಿದು ಪರಾರಿಯಾಗಿದ್ದಾನೆ.

ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಎಫ್‍ಐಆರ್‌ಗಳು ದಾಖಲಾಗಿವೆ. ಸದ್ಯ ಆರೋಪಿ ಕದಂಬ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News