ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ : ನ್ಯಾಯಾಂಗ ತನಿಖೆಗೆ ಟಿ.ಎ.ಶರವಣ ಆಗ್ರಹ
ಟಿ.ಎ.ಶರವಣ
ಬೆಂಗಳೂರು : ಆರ್‌ಸಿಬಿ ಗೆಲುವಿನ ಪ್ರಚಂಡ ವಿಜಯೋತ್ಸವವು ಪ್ರಚಂಡ ಮರಣೋತ್ಸವವಾಗಿ ಬದಲಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿ ಅಭಿಮಾನಿಗಳು, ಮುಗ್ಧರು, ಕಾಲ್ತುಳಿತಕ್ಕೆ ಜೀವತೆತ್ತಿರುವ ಘೋರ ದುರಂತವಾಗಿದೆ. ಈ ದುರಂತದ ಹೊಣೆಯನ್ನು ಸರಕಾರ ಮತ್ತು ಕಾರ್ಯಕ್ರಮದ ಆಯೋಜಕರು ಹೊರಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಜೆಡಿಎಸ್ ನಾಯಕ ಟಿ.ಎ.ಶರವಣ ಹೇಳಿದ್ದಾರೆ.
ಈ ಘಟನೆಯಿಂದ ಮನಸ್ಸು ಭಾರವಾಗಿದೆ. ಅಮಾಯಕ ಯುವಕರು, ಭವಿಷ್ಯದಲ್ಲಿ ಬೇಕಾದಷ್ಟು ಜವಾಬ್ದಾರಿ ಹೊರಬೇಕಾದ ತರುಣರು ದಾರುಣವಾಗಿ ಮೃತಪಟ್ಟಿದ್ದಾರೆ. ಇದಕ್ಕೆ ಹೊಣೆ ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.
ಪೂರ್ವ ಸಿದ್ಧತೆ ಇಲ್ಲದೆ, ಪೊಲೀಸ್ ಬಂದೋಬಸ್ತ್ ಇಲ್ಲದೆ, ಈ ಕಾರ್ಯಕ್ರಮ ನಡೆಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಥ ಭೀಕರ ಕಾಲ್ತುಳಿತ ಘಟನೆ ನಡೆದರೂ ಪೊಲೀಸ್ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಇಲ್ಲದಿರುವುದಕ್ಕೆ ಯಾರು ಕಾರಣ? ಈ ಕಾರ್ಯಕ್ರಮದ ಅಯೋಜಕರು ಯಾರು? ಇವತ್ತೇ ಈ ಕಾರ್ಯಕ್ರಮ ನಡೆಸಲೇ ಬೇಕಾದ ತುರ್ತು ಏನಿತ್ತು? ಸರಕಾರ ಈ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ನೀಡಿತು? ಅನುಮತಿ ಕೊಟ್ಟ ಮೇಲೆ ಪೊಲೀಸ್ ಬಂದೋಬಸ್ತ್ ಯಾಕಿರಲಿಲ್ಲ? ಇದರಲ್ಲಿ ಪೊಲೀಸ್ ವಿಫಲರಾಗಿದ್ದಾರೆಯೇ? ಎಂದು ಕೇಳಿದ್ದಾರೆ.
ಕಾರ್ಯಕ್ರಮದ ಆಯೋಜಕರು ಇರಬಹುದು, ಅಗತ್ಯ ಪೂರ್ವ ಸಿದ್ಧತಾ ಅಥವಾ ಭದ್ರತಾ ಕ್ರಮ ಕೈಗೊಳ್ಳದ ಪೊಲೀಸರೇ ಇರಬಹುದು. ತಕ್ಷಣ ಅವರನ್ನು ಬಂಧಿಸಬೇಕು. ಆಯೋಜಕರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಘಟನೆಯಲ್ಲಿ ಹಲವು ವೈಫಲ್ಯಗಳು ಇರುವುದರಿಂದ ತಕ್ಷಣವೇ ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ ಎಂದು ಅವರು ಆಗ್ರಹಿಸಿದ್ದಾರೆ.